
ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಂತ ಅನಾಥ ವಾಹನಗಳ ತೆರವು ಶುರು
ಬೆಂಗಳೂರು,ಜು.10- ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ಬಿಟ್ಟಿರುವ ವಾಹನಗಳ ವಿರುದ್ಧ ಇಂದಿನಿಂದ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ.

ಜಿಬಿಎ ಕಾಯ್ದೆ-2024ರ ಸೆಕ್ಷನ್ ೩೨೪ರ ಅನ್ವಯ ಈ ಕಾರ್ಯಾಚರಣೆ ಜಾರಿಗೆ ಬಂದಿದ್ದು, ಐದು ನಗರ ಪಾಲಿಕೆಗಳು ಹಾಗೂ ಸಂಚಾರ ಪೊಲೀಸ್ ಇಲಾಖೆ ಜಂಟಿಯಾಗಿ ಅನಾಥ ವಾಹನಗಳನ್ನು ಗುರುತಿಸಿ ತೆರವುಗೊಳಿಸುವ ಕ್ರಮ ಕೈಗೊಂಡಿವೆ.
ಇಂದು ಬೆಳಿಗ್ಗೆ ಕ್ವೀನ್ಸ್ ರಸ್ತೆಯಲ್ಲಿ ಅನಾಥ ವಾಹನಗಳ ತೆರವು ಕಾರ್ಯಚರಣೆಗೆ ಚಾಲನೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಮಾತಾನಾಡಿ, ಜಿಬಿಎ ಹಾಗೂ ಪೊಲೀಸ್ ಇಲಾಖೆ ಇಬ್ಬರೂ ಜಂಟಿಯಾಗಿ ಕಾರ್ಯಚರಣೆ ನಡೆಸಲಾಗುತ್ತೆ.ರಸ್ತೆ ಹಾಗೂ ಪುಟ್ ಪಾತ್ ಜಾಗದಲ್ಲಿ ತಮ್ಮ ಸ್ವಂತ ವಾಹನ ಬಿಟ್ಟಿದ್ದಾರೋ ಇವುಗಳ ತೆರವು ಕಾರ್ಯ ಮಾಡಬೇಕು ಅಂತ ಹದಿನೈದು ದಿನಗಳ ಹಿಂದೆ ಮನವಿ ಮಾಡಿದ್ವಿ ಆದ್ರೂ ಪಾರ್ಕ್ ಮಾಡಿರೋದ್ರಿಂದ ಜನರಿಗೆ ತೊಂದರೆಯಾಗ್ತಿದೆ.ಈ ರೀತಿ ವಾಹನಗಳನ್ನು ತಿಂಗಳು ಗಟ್ಟಲೇ ಬಿಟ್ಟು ಹೋಗ್ತಾರೆ ಯಾರಿಗೆ ಸೇರಿದ್ದು ಎಂಬುದು ಗೊತ್ತಿಲ್ಲ ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಣ ಮಾಡಿಕೊಂಡಿರೋದು ಕಾನೂನು ಉಲ್ಲಂಘನೆಯಾಗಿದೆ.ಒಂದು ರೀತಿಯಲ್ಲಿ ಬೆಂಗಳೂರು ಅಸಹ್ಯವಾಗಿ ಕಾಣಲು ಇದು ಕಾರಣವಾಗಿದೆ. ಹದಿನೈದು ದಿನಗಳ ಹಿಂದೆನೇ ಹೇಳಿದ್ರೂ ಸಹ ತೆರವು ಮಾಡಿಲ್ಲ.ಈಗಾಗಲೇ ಪೊಲೀಸರು 1581 ವೆಹಿಕಲ್ ರಸ್ತೆ ಬದಿಯಲ್ಲಿ ಬಿಟ್ಟಿರೋದನ್ನ ಗುರುತು ಮಾಡಿದ್ದಾರೆ.ಬಹುಶಃ ಅದರ ಸಂಖ್ಯೆ ಹೆಚ್ಚಿದೆ.
ಸದ್ಯ ವಾಹನಕ್ಕೆ ಒಂದು ವಾರದ ನೊಟೀಸ್ ಅಂಟಿಸುತ್ತೇವೆ ನೋಟಿಸ್ ಅಂಟಿಸಿ ಒಂದು ವಾರದ ಅವಕಾಶ ಮಾಲೀಕರಿಗೆ ನೀಡಲಾಗುತ್ತೆ ಸದ್ಯಕ್ಕೆ 500 ರೂ.ಹಾಗೂ 1000 ರೂ. ದಂಡ ಇದೆ. ಒಂದು ವಾರದ ನಂತರ ತೆಗೆದುಕೊಂಡಿಲ್ಲ ಎಂದರೆ ಟೋಯಿಂಗ್ ಮಾಡಬೇಕು.ಆದಾದ ಬಳಿಕ ಅವರು ಟೋಯಿಂಗ್ ಚಾರ್ಜ್‌ಸ್ ಕಟ್ಟಿ ಬಿಡಿಸಿಕೊಂಡು ಹೋಗಬಹುದು.ಆಗಲೂ ಬಾರದೇ ಇದ್ದರೆ ಹರಾಜು ಹಾಕ್ತೀವಿ ಯಾರು ಬೇಕಾದ್ರೂ ಹರಾಜಿನಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.
ಇನ್ನು ಇಂದು ಮೊದಲ ದಿನವೇ ನಗರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 1581 ಕ್ಕೂ ಹೆಚ್ಚು ಅನಾಥ ವಾಹನಗಳಿಗೆ ನೋಟಿಸ್ ಅಂಟಿಸಲಾಗಿದೆ. ನೋಟಿಸ್ ಪಡೆದ ವಾಹನಗಳ ಮಾಲೀಕರು 7 ದಿನಗಳೊಳಗೆ ತಮ್ಮ ವಾಹನವನ್ನು ಸ್ವಂತ ಜಾಗ ಅಥವಾ ಕಾಂಪೌಂಡ್‌ಗೆ ಸ್ಥಳಾಂತರಿಸಬೇಕು. ಇಲ್ಲವಾದರೆ ವಾಹನವನ್ನು ಜಪ್ತಿ ಮಾಡಿ ಹರಾಜು ಹಾಕಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ಅನಾಥವಾಗಿ ಬಿಟ್ಟು ಹೋಗದೇ, ತಕ್ಷಣವೇ ತೆರವುಗೊಳಿಸುವಂತೆ ಜಿಬಿಎ ಮನವಿ ಮಾಡಿದೆ.
