
ಶನಿವಾರದೊಳಗೆ ನೂತನ ಸಚಿವರ ಪದಗ್ರಹಣ?
ಬೆಂಗಳೂರು,ಜು.21: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸನ್ನಿಹಿತವಾಗಿದ್ದು, 3-4 ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುವುದು ಬಹುತೇಕ ನಿಶ್ಚಿತವಾಗಿದೆ.
ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಲು ಹಾಗೂ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್ ಹೈಕಮಾಂಡ್‌ನ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್‌ನ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ.
ಇಂದಿನ ಸಭೆಯಲ್ಲಿ ಕಾಂಗ್ರೆಸ್ ವರಿಷ್ಠ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಭಾಗಿಯಾಗಲಿದ್ದು, ಸಚಿವರ ಪಟ್ಟಿಗೆ ಇಂದೇ ಮೋಕ್ಷ ಸಿಗಲಿದೆ.
ರಾಜ್ಯ ಸಚಿವ ಸಂಪುಟದಲ್ಲಿ 20 ಸ್ಥಾನಗಳು ಖಾಲಿ ಇದ್ದು, ಆ ಸ್ಥಾನಗಳಿಗೆ 35 ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಹಾಗಾಗಿ ಸಚಿವರ ಪಟ್ಟಿ ಅಂತಿಮಗೊಳಿಸುವುದು ವರಿಷ್ಠರಿಗೆ ತಲೆ ನೋವು ತಂದಿದ್ದು,ಇದರ ಜತೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸಹ ತಮ್ಮ ಕಟ್ಟಾ ಬೆಂಬಲಿಗ ಶಾಸಕರಿಗೂ ಸಚಿವ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದು, ಸಚಿವರ ಪಟ್ಟಿ ಅಂತಿಮಗೊಳಿಸುವುದು ಗಜ ಪ್ರಸವದಂತಾಗಿದೆ.
ಕಳೆದ ವಾರ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಜತೆ ವರಿಷ್ಠರು ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ಒಂದು ಸುತ್ತಿನ ಚರ್ಚೆ ನಡೆಸಿದ್ದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ಪುತ್ರನ ಆರೋಗ್ಯದಲ್ಲಿ ಏರುಪೇರಾದ ಕಾರಣ ಖರ್ಗೆ ಸಭೆಯನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದರು. ಹಾಗಾಗಿ ಸಚಿವರ ಪಟ್ಟಿ ತಯಾರಿಸುವ ಚರ್ಚೆಯ ಸಭೆ ಅಪೂರ್ಣಗೊಂಡಿತ್ತು.
ಇದಾದ ಬಳಿಕ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಅವರು ಖರ್ಗೆ ದೆಹಲಿಗೆ ಬಂದ ನಂತರ ಬುಲಾವ್ ಕಳುಹಿಸುತ್ತೇನೆ.ಮುಂದಿನ ವಾರ ಬನ್ನಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸೋಣ ಎಂದು ರಾಜ್ಯ ನಾಯಕರಿಗೆ ಸೂಚಿಸಿದ್ದರು.
ಅದರಂತೆ ನಿನ್ನೆ ದೆಹಲಿಗೆ ಬರುವಂತೆ ರಾಜ್ಯದ ಮೂವರು ನಾಯಕರಿಗೆ ಹೈಕಮಾಂಡ್ ಕರೆ ಮಾಡಿತ್ತು. ಹೈಕಮಾಂಡ್‌ನ ಬುಲಾವ್ ಮೇರೆಗೆ ಇಂದು ಬೆಳಗ್ಗೆ ಈ ಮೂವರು ಇಂದು ಬೆಳಗ್ಗೆ ದೆಹಲಿಗೆ ಬಂದಿಳಿದಿದ್ದರು.
ಸಂಸತ್ ಅಧೀವೇಶನ ನಡೆಯುತ್ತಿರುವ ಕಾರಣ ಸಂಜೆಯ ಬಳಿಕವೇ ಸಚಿವರ ಪಟ್ಟಿ ತಯಾರಿಕೆ ಚರ್ಚೆಯ ಸಭೆ ನಡೆಯಲಿದೆ. ಬಹುತೇಕ ಇಂದು ಸಚಿವರ ಪಟ್ಟಿ ಅಂತಿಮವಾಗಲಿದೆ.ಶುಕ್ರವಾರ ಇಲ್ಲವೆ ಶನಿವಾರ ನೂತನ ಸಚಿವರ ಪದಗ್ರಹಣ ನಡೆಯಲಿದೆ.
