
ಆಂಧ್ರ ಗಡಿ ಶಾಲೆಯಲ್ಲಿ ಅಡುಗೆ ಕೊಠಡಿಯೇ “ಮಾಯ” !!
ಕೋಲಾರ: ಆಂಧ್ರಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ಕೋಲಾರ ಜಿಲ್ಲೆಯ ಗಡಿ ಗ್ರಾಮವೊಂದರಲ್ಲಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಬರಬೇಕಿದ್ದ ಅನುದಾನ ಅಧಿಕಾರಶಾಹಿಯ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ.
ಶಾಲೆಯ ಬಿಸಿಊಟ ಅಡುಗೆ ಕೊಠಡಿ ನಿರ್ಮಾಣಕ್ಕೆ ಸರ್ಕಾರ ಅರ್ಧ ದಶಕದ ಹಿಂದೆ ಲಕ್ಷಾಂತರ ರೂಪಾಯಿ ಮಂಜೂರು ಮಾಡಿದ್ದರೂ, ಕಾಮಗಾರಿ ಮಾತ್ರ ಕಾಗದದಲ್ಲೇ ಉಳಿದಿದೆ. ಪರಿಣಾಮವಾಗಿ, ಮುಗ್ಧ ಶಾಲಾ ಮಕ್ಕಳು ತರಗತಿಯ ಒಳಗೇ ಅಡುಗೆ ಹೊಗೆಯ ನಡುವೆ ಪಾಠ ಕೇಳುವ ದುಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೈರ್ಮಲ್ಯಯುತ ವಾತಾವರಣದಲ್ಲಿ ಬಿಸಿಊಟ ತಯಾರಿಸಲು ಸರ್ಕಾರ 6 ಲಕ್ಷ ರೂಪಾಯಿ ವೆಚ್ಚದ ಅಡುಗೆ ಕೊಠಡಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿತ್ತು. ಆದರೆ, ಈ ಕಾಮಗಾರಿ ವರ್ಷಗಳು ಕಳೆದರೂ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತುಹೋಗಿದೆ.
ಅಡುಗೆ ಕೊಠಡಿ ಇಲ್ಲದ ಕಾರಣ ಅಡುಗೆ ಸಿಬ್ಬಂದಿ ಅನಿವಾರ್ಯವಾಗಿ ಶಾಲೆಯ ತರಗತಿ ಕೊಠಡಿಯ ಒಳಗಡೆಯೇ ಒಲೆ ಹೊತ್ತಿಸಿ ಅಡುಗೆ ಮಾಡುತ್ತಿದ್ದಾರೆ. ಅಡುಗೆ ಮಾಡುವ ಸಮಯದಲ್ಲಿ ಮಕ್ಕಳನ್ನು ಕೊಠಡಿಯಿಂದ ಹೊರಗೆ ಕೂರಿಸಲಾಗುತ್ತಿದ್ದು, ಹೊಗೆ ಮತ್ತು ಕಾಡಿನ ವಾಸನೆಯ ನಡುವೆಯೇ ಮಕ್ಕಳು ವಿದ್ಯಾಭ್ಯಾಸ ಮಾಡುವಂತಾಗಿದೆ. ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
PDO ರವಣಪ್ಪ ಅವರು ಕೇವಲ ಪಂಚಾಯಿತಿ ಕಚೇರಿ ಕೊಠಡಿಗೆ ಮಾತ್ರ ತಮ್ಮ ಸೇವೆಯನ್ನು ಸೀಮಿತಗೊಳಿಸಿಕೊಂಡಿದ್ದಾರೆ.
ಗಡಿ ಭಾಗದ ಎನ್. ಚೌಡೇನಹಳ್ಳಿ ಸೇರಿದಂತೆ ಯಾವುದೇ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸುತ್ತಿಲ್ಲ.ಶಾಲೆಯ ಅಡುಗೆ ಕೊಠಡಿ ಸೇರಿದಂತೆ ಗ್ರಾಮದ ಮೂಲಭೂತ ಸೌಕರ್ಯಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಕನಿಷ್ಠ ಸೌಜನ್ಯಕ್ಕೂ ಸ್ಪಂದಿಸಿಲ್ಲ.
ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ: ಚರಂಡಿ ನೀರು ರಸ್ತೆಯಲ್ಲೇ ಹರಿದು ಸಾಂಕ್ರಮಿಕ ರೋಗಗಳ ತಾಣವಾಗಿದೆ.
ಕುಡಿಯುವ ನೀರಿನ ಅಭಾವ: ಶುದ್ಧ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಕಿಲೋಮೀಟರ್‌ಗಟ್ಟಲೆ ಅಲೆಯುವಂತಾಗಿದೆ.
ಬೀದಿ ದೀಪ ಹಾಗೂ ರಸ್ತೆ ಇಲ್ಲ: ರಾತ್ರಿ ವೇಳೆ ಸಂಚರಿಸಲು ಸೂಕ್ತ ಬೀದಿ ದೀಪಗಳಿಲ್ಲದೆ, ಗುಂಡಿ ಬಿದ್ದ ರಸ್ತೆಗಳಲ್ಲೇ ದಿನ ದೂಡುವಂತಾಗಿದೆ.

ಈ ಸಾಂಕ್ರಮಿಕ ರೋಗಗಳ ಭಯ ಹಾಗೂ ನೈರ್ಮಲ್ಯದ ಕೊರತೆಯಿಂದಾಗಿ, ಬೇಸತ್ತ ಹಲವು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ, ಸಾಲಸೋಲ ಮಾಡಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಇದುವರೆಗೂ ಯಾವುದೇ ಹಿರಿಯ ಅಧಿಕಾರಿಗಳು ನಮ್ಮ ಗಡಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ. ಮೂಲಭೂತ ಸೌಕರ್ಯಗಳಿಲ್ಲದೆ ಶಾಲೆಯ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದರಿಂದಾಗಿ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ನಾವು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಎಷ್ಟೇ ಅರ್ಜಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.
ಗ್ರಾಮದಲ್ಲಿ ಸಾಂಕ್ರಮಿಕ ರೋಗಗಳು ಹರಡಿ, ನಾವೆಲ್ಲರೂ ಸರ್ಕಾರಿ ಆಸ್ಪತ್ರೆಯ ಬಾಗಿಲು ತಟ್ಟುವ ಮುನ್ನ, ದಯವಿಟ್ಟು ನಮ್ಮ ಗ್ರಾಮ ಮತ್ತು ಶಾಲೆಯ ಸಮಸ್ಯೆಯನ್ನು ಬಗೆಹರಿಸಿ ಎಂದು ಅಧಿಕಾರಿಗಳಿಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದೇವೆ,” ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.
