LatestTop Storiesಜಿಲ್ಲಾ ಸುದ್ದಿಗಳು | District News

ಯಶಸ್ವಿನಿ ಕಾರ್ಡ್ ಹೆಸರಿನಲ್ಲಿ ಹಣ ವಸೂಲಿ: ನಕಲಿ ಕಾರ್ಡ್ ನೀಡಿ ವಂಚನೆ ಆರೋಪ

ಕೊಪ್ಪಳ.ಸೆ.22- ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದಲ್ಲಿ ಯಶಸ್ವಿನಿ ಕಾರ್ಡ್ ಮಾಡಿಕೊಡುವುದಾಗಿ ಹೇಳಿಕೊಂಡು ಜನರಿಂದ ಹಣ ಪಡೆದು ನಕಲಿ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಗ್ರಾಮದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಹುಬ್ಬಳ್ಳಿಯ ಯಶಸ್ವಿನಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯವರು ಎಂದು ಹೇಳಿಕೊಂಡು ಬಂದ ತಂಡವೊಂದು ಗ್ರಾಮಸ್ಥರಿಗೆ ಯಶಸ್ವಿನಿ ಕಾರ್ಡ್ ಮಾಡಿಕೊಡುವುದಾಗಿ ನಂಬಿಸಿ, ಪ್ರತಿ ಕಾರ್ಡ್ಗೆ 300ರಂತೆ ಹಣ ಪಡೆದುಕೊಂಡಿದೆ.ಸುಮಾರು 1,500ಕ್ಕೂ ಹೆಚ್ಚು ಕಾರ್ಡ್ಗಳನ್ನು ಮಾಡಿಕೊಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆಧಾರ್, ಪಡಿತರ ಚೀಟಿ ಪಡೆದು ಮಾಹಿತಿ ಸಂಗ್ರಹ :

ಸುಮಾರು ಒಂದು ವಾರದ ಹಿಂದೆ ಸಂಸ್ಥೆಯ ಸಿಬ್ಬಂದಿ ಎಂದು ಹೇಳಿಕೊಂಡ ತಂಡವೊಂದು ಹಿರೇಮ್ಯಾಗೇರಿ ಗ್ರಾಮಕ್ಕೆ ಆಗಮಿಸಿ, ಗ್ರಾಮಸ್ಥರಿಂದ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ಪಡೆದುಕೊಂಡಿತ್ತು. ಬಳಿಕ ಯಶಸ್ವಿನಿ ಯೋಜನೆಯಡಿ ಕಾರ್ಡ್ ಮಾಡಿಕೊಡಲಾಗುವುದು ಎಂದು ತಿಳಿಸಿ, ಹಣವನ್ನು ಸಂಗ್ರಹಿಸಿಕೊಂಡು ಹೋಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸೋಮವಾರ ಬೆಳಗಿನ ಜಾವವೇ ಸುಮಾರು ಎಂಟು ಜನರ ತಂಡ ಗ್ರಾಮಕ್ಕೆ ಆಗಮಿಸಿ, ಕಾರ್ಡ್ಗಳಿಗೆ ಸಂಬಂಧಿಸಿದಂತೆ ಹಣ ಸಂಗ್ರಹಿಸುತ್ತಿದ್ದಾಗ ಗ್ರಾಮಸ್ಥರಿಗೆ ಅನುಮಾನ ಮೂಡಿದೆ. ಈ ವೇಳೆ ಕೆಲವರು ಕಾರ್ಡ್ಗಳನ್ನು ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಆಸ್ಪತ್ರೆಗಳಿಗೆ ಕರೆ ಮಾಡಿದಾಗ ಅಸಲಿ ವಿಚಾರ ಬಯಲು :

ಕಾರ್ಡ್ ಪಡೆದ ಕೆಲ ಗ್ರಾಮಸ್ಥರು ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಆಸ್ಪತ್ರೆಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಈ ಕಾರ್ಡ್ ತೋರಿಸಿದರೆ ಚಿಕಿತ್ಸೆ ಪಡೆಯಬಹುದೇ ಎಂದು ವಿಚಾರಿಸಿದ್ದಾರೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ಇಂತಹ ಯಾವುದೇ ಕಾರ್ಡ್ನಿಂದ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ತಮಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿ ಸಂಸ್ಥೆಯ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಸಿಬ್ಬಂದಿಯನ್ನು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಕೂಡಿ ಹಾಕಿ, ತಮ್ಮ ಹಣವನ್ನು ವಾಪಸ್ ನೀಡಬೇಕು ಹಾಗೂ ನಕಲಿ ಕಾರ್ಡ್ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮಪಂಚಾಯ್ತಿ ಕಚೇರಿಗೆ ನೂರಾರು ಜನರ ಮುತ್ತಿಗೆ :

ಘಟನೆ ತಿಳಿಯುತ್ತಿದ್ದಂತೆ ಗ್ರಾಮದ ಸ್ಥಳೀಯ ಯುವಕರು, ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದರು. ಯಶಸ್ವಿನಿ ಕಾರ್ಡ್ ಹೆಸರಿನಲ್ಲಿ ಹಣ ಸಂಗ್ರಹಿಸಲು ಅವಕಾಶ ನೀಡಿದವರು ಯಾರು? ಸಂಸ್ಥೆಗೆ ಗ್ರಾಮದಲ್ಲಿ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿತ್ತೇ? ಗ್ರಾಮಸ್ಥರ ಆಧಾರ್, ಪಡಿತರ ಚೀಟಿ ಹಾಗೂ ಫೋಟೋಗಳನ್ನು ಏಕೆ ಸಂಗ್ರಹಿಸಲಾಗಿದೆ? ಎಂಬ ಪ್ರಶ್ನೆಗಳನ್ನು ಪಂಚಾಯಿತಿ ಅಧಿಕಾರಿಗಳ ಮುಂದಿಟ್ಟರು.

ತಮ್ಮ ದಾಖಲೆಗಳನ್ನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಅವುಗಳ ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಬೇಕು. ಹಣ ಪಡೆದುಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಗ್ರಾಮಸ್ಥರಿಂದ ಸಂಗ್ರಹಿಸಿದ ಹಣವನ್ನು ಮರಳಿ ಕೊಡಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಗ್ರಾಮಪಂಚಾಯ್ತಿ ಇಂದ ಜಾಗೃತಿ :

ಯಶಸ್ವಿನಿ ಕಾರ್ಡ್ ಸೇರಿದಂತೆ ವಿವಿಧ ಯೋಜನೆಗಳ ಹೆಸರಿನಲ್ಲಿ ಅನಧಿಕೃತವಾಗಿ ಹಣ ವಸೂಲಿ ಮಾಡುವವರ ಬಗ್ಗೆ ಗ್ರಾಮ ಪಂಚಾಯಿತಿ ವತಿಯಿಂದ ಈ ಹಿಂದೆ ವಾಹನದ ಮೂಲಕ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಆದರೆ,ಇದೀಗ ಘಟನೆ ನಡೆದ ಬಳಿಕ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಗ್ರಾಮದಲ್ಲಿ ಇಂತಹ ಚಟುವಟಿಕೆ ನಡೆಯುತ್ತಿರುವುದು ಪಂಚಾಯಿತಿಯ ಗಮನಕ್ಕೆ ಬಂದಿರಲಿಲ್ಲವೇ? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಸಂಸ್ಥೆ ಜನರಿಂದ ದಾಖಲೆಗಳನ್ನು ಪಡೆದು ಹಣ ಸಂಗ್ರಹಿಸುವ ಸಂದರ್ಭದಲ್ಲಿ ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಜನರ ದಾಖಲೆಗಳ ಸುರಕ್ಷತೆ ಹಾಗೂ ಹಣದ ವಿಚಾರದಲ್ಲಿ ಪಂಚಾಯಿತಿ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಸ್ಥಳಕ್ಕೆ ಪಿಎಸ್‌ಐ ಭೇಟಿ :

ಗ್ರಾಮದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವ ಮಾಹಿತಿ ತಿಳಿದು ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ಕಚೇರಿಗೆ ಪಿಎಸ್‌ಐ ವಿಜಯಪ್ರತಾಪ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಗ್ರಾಮಸ್ಥರ ಅಹವಾಲು ಆಲಿಸಿ, ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು.

ಆಕ್ರೋಶಗೊಂಡಿದ್ದ ಜನರನ್ನು ಸಮಾಧಾನಪಡಿಸಿದ ಅವರು, ಘಟನೆಗೆ ಸಂಬಂಧಿಸಿದ ದಾಖಲೆಗಳು, ಹಣ ವಸೂಲಿ ಮಾಡಿರುವ ವಿವರ ಹಾಗೂ ಕಾರ್ಡ್ಗಳ ಕುರಿತು ಮಾಹಿತಿ ಸಂಗ್ರಹಿಸಿ, ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಯಾವುದೇ ಸಂಸ್ಥೆಯವರು ಸರ್ಕಾರದ ಯೋಜನೆ ಅಥವಾ ಆರೋಗ್ಯ ಯೋಜನೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಳ್ಳುವ ಮುನ್ನ ಅದರ ಅಧಿಕೃತತೆ ಪರಿಶೀಲಿಸುವಂತೆ ಪೊಲೀಸರು ಹಾಗೂ ಅಧಿಕಾರಿಗಳು ಗ್ರಾಮಸ್ಥರಿಗೆ ಸೂಚಿಸಿದರು.

ಪಂಚಾಯಿತಿಯಿಂದ ದೂರು -ಪಿಡಿಒ :

ನಮ್ಮ ಗಮನಕ್ಕೆ ಈ ಸಂಸ್ಥೆಯ ಚಟುವಟಿಕೆಗಳು ಬಂದಿರಲಿಲ್ಲ. ಯಾವುದೇ ಸಂಸ್ಥೆಗೆ ಗ್ರಾಮ ಪಂಚಾಯಿತಿಯಿAದ ಪರವಾನಗಿ ನೀಡಿಲ್ಲ. ನಮ್ಮ ಸಿಬ್ಬಂದಿಯನ್ನು ವಿಚಾರಿಸಿದಾಗ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹೇಳಿದ್ದಾರೆ ಎಂದು ಸಂಸ್ಥೆಯವರು ತಿಳಿಸಿರುವುದಾಗಿ ಹೇಳುತ್ತಿದ್ದಾರೆ. ಈ ಕುರಿತು ಪರಿಶೀಲಿಸಿ, ಗ್ರಾಮ ಪಂಚಾಯಿತಿ ವತಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ಪಿಡಿಒ ಮಂಗಳೇಶ ನಾಯಕ ತಿಳಿಸಿದ್ದಾರೆ.

ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣ ಹಾಗೂ ದಾಖಲೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Share with Friends
author avatar
Digital Desk