LatestTop Storiesಜಿಲ್ಲಾ ಸುದ್ದಿಗಳು | District Newsಮೈಸೂರು-Mysuru

ನಂಜನಗೂಡು ಸರ್ಕಾರಿ ಕಾಲೇಜಿನಲ್ಲಿ ಅವ್ಯವಸ್ಥೆ ಆರೋಪ

ಮೈಸೂರು.ಸೆ.22-ನಂಜನಗೂಡಿನ ಸರ್ಕಾರಿ ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ಕಾಲೇಜು ಅಭಿವೃದ್ಧಿ ಶುಲ್ಕ ಸಂಗ್ರಹಕ್ಕೆ ಸಂಬಂಧಿಸಿದಂತೆ ಹಲವು ಆರೋಪಗಳು ಕೇಳಿಬಂದಿವೆ.

ಕಾಲೇಜಿನಲ್ಲಿ ಸುಮಾರು 178 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಶೌಚಾಲಯಗಳು ದುಸ್ಥಿತಿಯಲ್ಲಿದ್ದು, ಪ್ರಯೋಗಾಲಯದಲ್ಲಿ ಅಗತ್ಯ ಸಲಕರಣೆಗಳ ಕೊರತೆಯಿದೆ.ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಗತ್ಯವಾದ ಸಮರ್ಪಕ ಗ್ರಂಥಾಲಯದ ಸೌಲಭ್ಯವೂ ಇಲ್ಲ ಎಂಬ ಆರೋಪ ಕೇಳಿಬಂದಿದೆ.

ಇದರ ನಡುವೆ ವಿದ್ಯಾರ್ಥಿಗಳಿಂದ ಕಾಲೇಜು ಅಭಿವೃದ್ಧಿ ಶುಲ್ಕವೆಂದು ತಲಾ 800 ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿದೆ.ಆದರೆ ಕಾಲೇಜಿನಲ್ಲಿ ಅಭಿವೃದ್ಧಿ ಸಮಿತಿ ಇಲ್ಲದಿದ್ದರೂ ಶುಲ್ಕ ಸಂಗ್ರಹಿಸಿರುವುದು ಪ್ರಶ್ನೆಗೆ ಕಾರಣವಾಗಿದೆ.

ಸರ್ಕಾರದಿಂದ ಲಭ್ಯವಾಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕಾಲೇಜಿನ ಪ್ರಾಂಶುಪಾಲ ಕೆಂಡಗಣ್ಣಸ್ವಾಮಿ ಹೆಡಿಯಾಲ ಸರ್ಕಾರಿ ಪಿಯು ಕಾಲೇಜಿನ ಜವಾಬ್ದಾರಿಯ ಜೊತೆಗೆ ದೇಬೂರು ಸರ್ಕಾರಿ ಆದರ್ಶ ಪಿಯು ಕಾಲೇಜಿನ ಹೆಚ್ಚುವರಿ ಜವಾಬ್ದಾರಿಯನ್ನೂ ಹೊಂದಿದ್ದಾರೆ.

ಹೆಚ್ಚುವರಿ ಜವಾಬ್ದಾರಿಯಿಂದಾಗಿ ಆದರ್ಶ ಪಿಯು ಕಾಲೇಜಿಗೆ ಸಮರ್ಪಕವಾಗಿ ಭೇಟಿ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.ಅಲ್ಲದೆ,ಅಭಿವೃದ್ಧಿ ಶುಲ್ಕದ ಹಣದ ಬಳಕೆಗೆ ಸಂಬಂಧಿಸಿದಂತೆ ಪ್ರಾಂಶುಪಾಲರ ವಿರುದ್ಧ ಹಣ ದುರ್ಬಳಕೆಯ ಆರೋಪವೂ ವ್ಯಕ್ತವಾಗಿದೆ.

ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ಸಂಗ್ರಹಿಸಿರುವ ಅಭಿವೃದ್ಧಿ ಶುಲ್ಕದ ಬಳಕೆ ಹಾಗೂ ಕಾಲೇಜಿಗೆ ಲಭ್ಯವಾಗಿರುವ ಸರ್ಕಾರಿ ಅನುದಾನ ಮತ್ತು ಸೌಲಭ್ಯಗಳ ಬಳಕೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆರೋಪಗಳ ಕುರಿತು ಸಂಬಂಧಪಟ್ಟ ಕಾಲೇಜು ಆಡಳಿತ ಹಾಗೂ ಅಧಿಕಾರಿಗಳ ಸ್ಪಷ್ಟೀಕರಣ ದೊರೆತ ಬಳಿಕ ಮತ್ತಷ್ಟು ಮಾಹಿತಿ ಹೊರಬರಬೇಕಿದೆ.

Share with Friends
author avatar
Digital Desk