Health | ಆರೋಗ್ಯLatestTop Storiesಬೆಂಗಳೂರು-Bengaluru

ಏಳು ದಿನಗಳಿಂದ ಔಷಧಿ ಕೊರತೆ; ರೋಗಿಗಳ ಪರದಾಟ-ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ

ಬೆಂಗಳೂರು.ಅ.5- ಸಮುದಾಯ ಆರೋಗ್ಯ ಅಧಿಕಾರಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳ ಆರೋಗ್ಯ ಸೇವೆ ಮೇಲೆ ಪರಿಣಾಮ ಬೀರುವಂತಾಗಿದೆ.ಹಳ್ಳಿಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸೇವೆಗಳು ಸಕಾಲಕ್ಕೆ ದೊರೆಯದೆ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಪಿ, ಶುಗರ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನಿಯಮಿತ ತಪಾಸಣೆ ಹಾಗೂ ಔಷಧೋಪಚಾರದಲ್ಲಿ ತೊಂದರೆ ಎದುರಾಗಿದೆ. ಗರ್ಭಿಣಿಯರ ಆರೋಗ್ಯ ತಪಾಸಣೆ ಸೇರಿದಂತೆ ಹಲವು ಅಗತ್ಯ ಸೇವೆಗಳ ಮೇಲೂ ಪ್ರತಿಭಟನೆಯ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ಸಮುದಾಯ ಆರೋಗ್ಯ ಅಧಿಕಾರಿಗಳು ಕರ್ತವ್ಯದಿಂದ ದೂರ ಉಳಿದಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಏಳು ದಿನಗಳಿಂದ ಔಷಧಿ ಸಿಗುತ್ತಿಲ್ಲ ಎಂದು ಕೆಲವು ರೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಚ್‌ಒಗಳ ಬೇಡಿಕೆಗಳೇನು ಎಂಬುದನ್ನು ಸರ್ಕಾರ ಪರಿಶೀಲಿಸಿ, ನ್ಯಾಯಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು. ಪ್ರತಿಭಟನೆಯಿಂದ ನಮಗೆ ತೊಂದರೆಯಾಗುತ್ತಿದೆ.ಅಗತ್ಯ ಔಷಧಿ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರೋಗಿಗಳು ಮನವಿ ಮಾಡಿದ್ದಾರೆ.

ಆರೋಗ್ಯ ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವ ಮೂಲಕ ಪ್ರತಿಭಟನೆ ಅಂತ್ಯಗೊಳಿಸಿ,ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಸೇವೆ ಸಹಜ ಸ್ಥಿತಿಗೆ ಮರಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Share with Friends
author avatar
Digital Desk