
ಹಾಲಿನ ಬೆನ್ನಲ್ಲೇ ಬಸ್ ಪ್ರಯಾಣ ದರ ಹೆಚ್ಚಳ ಸಾಧ್ಯತೆ!
ಬೆಂಗಳೂರು,ಅ.16- ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಎದುರಾಗಿದೆ.
ಹಾಲಿನ ದರ ಏರಿಕೆಯ ಚರ್ಚೆಯ ಬೆನ್ನಲ್ಲೇ ರಾಜ್ಯದ ಸಾರಿಗೆ ಬಸ್ಗಳ ಪ್ರಯಾಣ ದರವೂ ಹೆಚ್ಚಳವಾಗುವ ಸಾಧ್ಯತೆ ಇದೆ. ಬಸ್ ಪ್ರಯಾಣ ದರವನ್ನು ಶೇ. 25ರಷ್ಟು ಹೆಚ್ಚಿಸುವಂತೆ ಸಮಿತಿಯೊಂದು ಶಿಫಾರಸು ಮಾಡಿದ್ದು, ಈ ಕುರಿತು ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ಅತುಲ್ ತಿವಾರಿ ನೇತೃತ್ವದ ಸಮಿತಿಯು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಹಾಗೂ ನಷ್ಟದ ಕುರಿತು ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಾಲ್ಕು ಸಾರಿಗೆ ನಿಗಮಗಳು ನಿರಂತರ ನಷ್ಟ ಅನುಭವಿಸುತ್ತಿರುವುದು, ಸಿಬ್ಬಂದಿಯ ವೇತನ ಹೆಚ್ಚಳ, ಡೀಸೆಲ್ ಬೆಲೆ ಏರಿಕೆ ಹಾಗೂ ಬಸ್ಗಳ ಬಿಡಿಭಾಗಗಳ ಬೆಲೆ ಹೆಚ್ಚಳ ಸೇರಿದಂತೆ ಹಲವು ಅಂಶಗಳನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ವರ್ಷಕ್ಕೆ 8 ಸಾವಿರ ಕೋಟಿ ನಷ್ಟದ ಹೊರೆ:
ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ವಿವಿಧ ಕಾರಣಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಕಾರ್ಯಾಚರಣೆಯ ವೆಚ್ಚ ಹೆಚ್ಚಳ ಹಾಗೂ ಸಿಬ್ಬಂದಿಯ ವೇತನ ಪರಿಷ್ಕರಣೆಯಿಂದ ನಿಗಮಗಳ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ. ಇದರಿಂದಾಗಿ ಸಾರಿಗೆ ನಿಗಮಗಳಿಗೆ ವಾರ್ಷಿಕವಾಗಿ ಸುಮಾರು 8,000 ಕೋಟಿ ನಷ್ಟವಾಗುತ್ತಿದೆ ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಲಾಗುತ್ತಿದೆ.ಈ ಯೋಜನೆಯಡಿ ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಸುಮಾರು 6,600 ಕೋಟಿ ಹಣ ಬಾಕಿ ಉಳಿದಿದೆ ಎಂಬ ಮಾಹಿತಿಯೂ ಚರ್ಚೆಯಲ್ಲಿದೆ. ಬಾಕಿ ಹಣ ಬಿಡುಗಡೆ ಹಾಗೂ ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚವು ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ.
ಶೇ. 25ರ ಬದಲು ಶೇ. 15ರಿಂದ 17ರಷ್ಟು ಹೆಚ್ಚಳ?
ಸಮಿತಿಯು ಶೇ. 25ರಷ್ಟು ಪ್ರಯಾಣ ದರ ಏರಿಕೆಗೆ ಶಿಫಾರಸು ಮಾಡಿದ್ದರೂ, ಅಷ್ಟರ ಮಟ್ಟಿಗೆ ದರ ಹೆಚ್ಚಿಸಲು ಸರ್ಕಾರ ಹಿಂದೇಟು ಹಾಕುವ ಸಾಧ್ಯತೆ ಇದೆ.ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಶೇ. 15ರಿಂದ 17ರಷ್ಟು ದರ ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ,ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಗಳ ಬಸ್ ಪ್ರಯಾಣ ದರವನ್ನು ಶೇ. 14ರಿಂದ 15ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಇನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಗಳ ಪ್ರಯಾಣ ದರವನ್ನು ಶೇ. 17ರಷ್ಟು ಹೆಚ್ಚಿಸುವ ಪ್ರಸ್ತಾವನೆಯೂ ಚರ್ಚೆಯಲ್ಲಿದೆ ಎನ್ನಲಾಗಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ?
ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದ್ದು, ಸಭೆಯ ಬಳಿಕ ದರ ಏರಿಕೆ ಕುರಿತು ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ, ಸಾರಿಗೆ ನಿಗಮಗಳ ನಷ್ಟ ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯವೇ ಎಂಬ ಪ್ರಶ್ನೆ ಒಂದೆಡೆಯಾದರೆ, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತಷ್ಟು ಆರ್ಥಿಕ ಹೊರೆ ಬೀಳುವ ಆತಂಕ ಇನ್ನೊಂದೆಡೆ ಇದೆ. ಆದರೆ, ಸರ್ಕಾರದ ಅಧಿಕೃತ ಘೋಷಣೆ ಹೊರಬೀಳುವವರೆಗೆ ಬಸ್ ಪ್ರಯಾಣ ದರ ಏರಿಕೆಯನ್ನು ಅಂತಿಮ ನಿರ್ಧಾರವೆಂದು ಪರಿಗಣಿಸಲಾಗದು.
