Health | ಆರೋಗ್ಯLatestTop Storiesಬೆಂಗಳೂರು-Bengaluru

ನಕಲಿ ಔಷಧ ಜಾಲ ಫೈಜರ್‌ಗೆ 48 ಗಂಟೆ ಡೆಡ್‌ಲೈನ್..!

ಬೆಂಗಳೂರು,ಅ.1-ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಜರ್ ಕಂಪನಿಗೆ ಔಷಧ ನಿಯಂತ್ರಣ ಇಲಾಖೆ (ಎಫ್ ಡಿಎ) ಆಯುಕ್ತ ಶ್ರೀನಿವಾಸ್ ಅವರು 48 ಗಂಟೆಗಳ ಗಡುವು ನೀಡಿದ್ದಾರೆ.ಬಿಡದಿ ಸಮೀಪ ಪತ್ತೆಯಾದ ನಕಲಿ ಔಷಧಿಗಳಲ್ಲಿ ಫೈಜರ್ ಕಂಪನಿಯ ಔಷಧಿಗಳೂ ಪತ್ತೆಯಾಗಿವೆ. ಅಲ್ಲದೆ, ಫೈಜರ್ ಕಂಪನಿಯ ಹೆಸರಿನಲ್ಲಿ ನಕಲಿ ಔಷಧಿಗಳನ್ನು ತಯಾರಿಸುತ್ತಿದ್ದ ಅಕ್ರಮ ಘಟಕವೊಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ.

ಈ ಪ್ರಕರಣದ ತನಿಖೆಗೆ ಭಾರತದಲ್ಲಿರುವ ಫೈಜರ್ ಸಂಸ್ಥೆ ಸೂಕ್ತ ದಾಖಲೆಗಳು ಹಾಗೂ ಅಗತ್ಯ ಮಾಹಿತಿಯನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಒಂದು ತಿಂಗಳಿನಿಂದ ದಾಖಲೆಗಳನ್ನು ಕೇಳಿದ್ದರೂ ಕಂಪನಿ ತನಿಖೆಗೆ ಅಗತ್ಯ ಸಹಕಾರ ನೀಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎಫ್ ಡಿಎ ಆಯುಕ್ತ ಶ್ರೀನಿವಾಸ್ ಅವರು ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಫೈಜರ್ ಕಂಪನಿಯ ಪ್ರಧಾನ ಕಚೇರಿಗೆ ಪತ್ರ ಬರೆದಿದ್ದಾರೆ.

ಅಸಲಿ ಔಷಧಿಗಳೊಂದಿಗೆ ನಕಲಿ ಔಷಧಿಗಳು ಮಿಶ್ರಣವಾಗಿರುವುದನ್ನು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿದ್ದು, ಈ ಹಿನ್ನೆಲೆಯಲ್ಲಿ ಕಂಪನಿಯಿಂದ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ತಕ್ಷಣ ಒದಗಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ.

48ಗಂಟೆಗಳ ಗಡುವು:
ಫೈಜರ್ ಕಂಪನಿಯ ಔಷಧಿಗಳ ಮಾರಾಟ, ಸರಬರಾಜು ಹಾಗೂ ನಕಲಿ ಔಷಧಿಗಳ ವಿತ್‌ಡ್ರಾ ಕುರಿತ ಮಾಹಿತಿಯನ್ನು ನೀಡುವಂತೆ ಎಫ್ ಡಿಎ ಸೂಚಿಸಿದೆ. ಈ ಸಂಬಂಧ ಮೂರು ತುರ್ತು ನಿರ್ದೇಶನಗಳನ್ನು ನೀಡಲಾಗಿದೆ.
ತಕ್ಷಣ ಮಾಹಿತಿ ಸಲ್ಲಿಕೆ:
ಭಾರತದಲ್ಲಿರುವ ಫೈಜರ್ ಸಂಸ್ಥೆಯು ತನ್ನ ಔಷಧಿಗಳ ಸರಬರಾಜು, ಎಲ್ಲೆಲ್ಲಿ ಮಾರಾಟವಾಗಿದೆ ಹಾಗೂ ನಕಲಿ ಔಷಧಿಗಳ ವಿತ್‌ಡ್ರಾ ಎಲ್ಲಿ ನಡೆದಿದೆ ಎಂಬ ಸಂಪೂರ್ಣ ಮಾಹಿತಿಯನ್ನು 48 ಗಂಟೆಗಳೊಳಗೆ ಸಲ್ಲಿಸಬೇಕು.
ಸ್ಟಾಕ್ ಪತ್ತೆಗೆ ಸಹಕಾರ:
ಆಸ್ಪತ್ರೆಗಳು ಹಾಗೂ ಸಗಟು ಔಷಧಿ ಮಳಿಗೆಗಳಲ್ಲಿ ಇರುವ ಅಸಲಿ ಸ್ಟಾಕ್ ಮತ್ತು ನಕಲಿ ಸ್ಟಾಕ್ ಅನ್ನು ಗುರುತಿಸಿ ಪತ್ತೆಹಚ್ಚಲು ಭಾರತೀಯ ಅಧಿಕಾರಿಗಳಿಗೆ ಅಗತ್ಯ ತಾಂತ್ರಿಕ ಹಾಗೂ ದಾಖಲೆ ಆಧಾರಿತ ಸಹಕಾರ ನೀಡಬೇಕು.
ಸಿಬ್ಬಂದಿ ವಿರುದ್ಧ ಕ್ರಮ:
ನಕಲಿ ಔಷಧಿಗಳು ಕ್ಲಿನಿಕ್‌ಗಳಿಗೆ ಸರಬರಾಜಾಗಲು ಸಹಕರಿಸಿರುವುದು ಕಂಡುಬಂದಲ್ಲಿ, ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ತನಿಖೆಗೆ ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿ ವಿಳಂಬ ಮಾಡದೆ, ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಫೈಜರ್‌ನ ಪ್ರಧಾನ ಕಚೇರಿಗೆ ಎಫ್ ಡಿಎ ಆಯುಕ್ತರು ಸೂಚಿಸಿದ್ದಾರೆ.

Share with Friends
author avatar
Digital Desk