
ಸೌಜನ್ಯ ಪ್ರಕರಣ : ಐಪಿಎಸ್ ಲೋಕೇಶ್ ತನಿಖಾಧಿಕಾರಿಯಾಗಿ ನೇಮಕ
ಬೆಂಗಳೂರು, ಅ.1: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆಗೆ ರಚನೆಯಾಗಿರುವ ವಿಶೇಷ ತನಿಖಾ ತಂಡ (ಎಸ್ ಐಟಿ)ದ ಹಿರಿಯ ಐಪಿಎಸ್ ಅಧಿಕಾರಿ ಲೋಕೇಶ್ ಬಿ. ಜಗಲಾಸರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.
ಎಸ್‌ಐಟಿ ಮುಖ್ಯಸ್ಥ ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಕರಣದ ತೀವ್ರತೆ ಹಾಗೂ ಗಂಭೀರತೆಯನ್ನು ಪರಿಗಣಿಸಿ ಲೋಕೇಶ್ ಬಿ. ಜಗಲಾಸರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಅವರಿಗೆ ಸಹಾಯಕ ತನಿಖಾಧಿಕಾರಿಯಾಗಿ ಎಸಿಪಿ ಮನೋಜ್ ಕುಮಾರ್ ನಾಯ್ಕ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಎಸಿಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿಯಲಿದೆ.ಲೋಕೇಶ್ ಬಿ. ಜಗಲಾಸರ್ ಅವರು ಈ ಹಿಂದೆ ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳ ಎಸ್‌ಪಿಯಾಗಿ, ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಸಿಐಡಿಯಲ್ಲಿ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಕರಣದ ತನಿಖೆಗೆ ತಾಂತ್ರಿಕ ಪರಿಣತಿ ಹೊಂದಿರುವ ಸಮರ್ಥ ಅಧಿಕಾರಿಗಳನ್ನು ಎಸ್‌ಐಟಿಗೆ ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಕೂಡ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಪದವೀಧರರಾಗಿರುವ ಲೋಕೇಶ್ ಬಿ. ಜಗಲಾಸರ್ ಅವರ ನೇಮಕಕ್ಕೆ ಮಹತ್ವ ನೀಡಲಾಗಿದೆ.
ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಏಳು ಕೋಟಿ ರೂ ದರೋಡೆ ಪ್ರಕರಣಗಳ ತನಿಖೆಯ ನೇತೃತ್ವವನ್ನೂ ಲೋಕೇಶ್ ಜಗಲಾಸರ್ ವಹಿಸಿದ್ದರು. ಅವರ ನೇತೃತ್ವದ ತಂಡ ದರೋಡೆಯಾಗಿದ್ದ ಸಂಪೂರ್ಣ ಹಣವನ್ನು ಎರಡು ದಿನಗಳಲ್ಲೇ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸೌಜನ್ಯ ಪ್ರಕರಣದ ತನಿಖೆಯ ಹೊಣೆಯನ್ನು ಅವರು ವಹಿಸಿಕೊಂಡಿದ್ದಾರೆ.
