LatestTop Storiesಜಿಲ್ಲಾ ಸುದ್ದಿಗಳು | District Newsತುಮಕೂರು-Tumakuru

ತಿಪಟೂರಿನಲ್ಲಿ ಶ್ರೀ ಭೂತಪ್ಪಸ್ವಾಮಿ ಹಬ್ಬಕ್ಕೆ ಭರದ ಸಿದ್ಧತೆ

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಕಾಡುಗೊಲ್ಲ ಸಮುದಾಯದ ಆರಾಧ್ಯ ದೈವ ಶ್ರೀ ಭೂತಪ್ಪಸ್ವಾಮಿ ಹಬ್ಬದ ಆಚರಣೆಗೆ ಅದ್ಧೂರಿ ಸಿದ್ಧತೆಗಳು ನಡೆದಿವೆ.

ಈ ಪ್ರಯುಕ್ತ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಮುದಾಯದ ಮುಖಂಡರು, ಕಾರ್ಯಕ್ರಮಕ್ಕೆ ನಾಡಿನ ಜನತೆಗೆ ಮುಕ್ತ ಆಹ್ವಾನ ನೀಡಿದ್ದಾರೆ.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡ ಜಗದೀಶ್ ಯಾದವ್ ಮಾತನಾಡಿ ಸೆಪ್ಟೆಂಬರ್ 22ರ ಮಂಗಳವಾರ ಸಂಜೆ 5:30ಕ್ಕೆ ‘ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ’ ಎಂಬ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಕಾಡುಗೊಲ್ಲ ಸಮುದಾಯದ ವಿಶಿಷ್ಟ ಸಂಸ್ಕೃತಿ ಮತ್ತು ಆಚರಣೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಹಬ್ಬವನ್ನು ವಿಶೇಷವಾಗಿ ರೂಪಿಸಲಾಗಿದೆ ಎಂದಿದ್ದಾರೆ.

ಕಾಡುಗೊಲ್ಲ ಸಮುದಾಯದ ಅಧ್ಯಕ್ಷ ಬಾಲರಾಜು ಮಾತನಾಡಿ ಈ ಬೃಹತ್ ಕಾರ್ಯಕ್ರಮಕ್ಕೆ ವಿವಿಧ ಗಣ್ಯರು ಕೇಂದ್ರ ಸಚಿವ ವಿ. ಸೋಮಣ್ಣ, ಸಚಿವ ಶಿವಲಿಂಗೇಗೌಡ,

ಸ್ಥಳೀಯ ಶಾಸಕ ಕೆ. ಷಡಕ್ಷರಿ, ಪ್ರಮುಖರಾದ ವಿ. ಯೋಗೀಶ್, ಕೆ.ಟಿ. ಶಾಂತಕುಮಾರ್, ಅಶ್ವಥ್ ನಾರಾಯಣ್, ಡಾ. ಶ್ರೀಧರ್, ಸಿ.ಬಿ. ಶಶಿಧರ್, ಲೋಕೇಶ್ವರ, ನಿಖಿಲ್ ರಾಜಣ್ಣ, ವಿಶ್ವದೀಪ್ ನಾಗೇಶ್, ಶಂಕರಪ್ಪ ಸೇರಿದಂತೆ ಹಲವು ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಅಧ್ಯಕ್ಷ ಬಾಲರಾಜು, ಜಗದೀಶ್ ಯಾದವ್, ಹರೀಶ್, ಜಯಣ್ಣ, ಶಿವಕುಮಾರ್ ಮತ್ತಿಹಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು, ಸಾರ್ವಜನಿಕರು ಹಾಗೂ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಿದರು.

Share with Friends
author avatar
Digital Desk