
ಬೆಂಗಳೂರಿನಲ್ಲಿ ಮುಂದುವರಿದ ಮಳೆ; ಹಲವೆಡೆ ಜಲಾವೃತ..
ಬೆಂಗಳೂರು.ಸೆ.22- ನಗರದಲ್ಲಿ ಕಳೆದ ಮೂರು ದಿನಗಳಿಂದ ಮಳೆ ಮುಂದುವರಿದಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಕಳೆದ ರಾತ್ರಿ ಆರಂಭವಾದ ಮಳೆ ತಡರಾತ್ರಿವರೆಗೂ ಸುರಿಯಿತು. ಇಂದು ಬೆಳಗ್ಗೆ ಕೆಲಕಾಲ ಬಿಡುವು ನೀಡಿದ ಮಳೆ ಮುಂದುವರೆಯುವ ಲಕ್ಷಣಗಳು ಕಂಡು ಬಂದಿವೆ
ಮಳೆಯಿಂದ ನಗರದ ತಾಪಮಾನ ಇಳಿಕೆಯಾಗಿದ್ದು, ವಾತಾವರಣ ತಂಪಾಗಿದೆ. ಕೆ.ಆರ್.ಪುರ ಸೇರಿದಂತೆ ಪೂರ್ವ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತು ವಾಹನ ಸವಾರರು ಪರದಾಡುವಂತಾಯಿತು.
ರಾಮಮೂರ್ತಿನಗರದ ದೂರವಾಣಿ ನಗರ ರಸ್ತೆಯಲ್ಲಿ ಸುಮಾರು ಎರಡು ಅಡಿ ನೀರು ನಿಂತ ಪರಿಣಾಮ ವಾಹನ ಸಂಚಾರ ನಿಧಾನಗೊಂಡಿತು. ರಸ್ತೆಯೇ ನದಿಯಂತಾಗಿದ್ದರಿಂದ ವಾಹನಗಳು ನೀರಿನಲ್ಲೇ ಸಂಚರಿಸುವಂತಾಯಿತು. ಇದರಿಂದ ಸ್ಥಳದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದರು.

ಹಲವು ಕಡೆ ಸಂಚಾರ ಅಸ್ತವ್ಯಸ್ತ:
ಬಾಗಲೂರು ಕ್ರಾಸ್‌ನಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸಂಚಾರ ನಿಧಾನಗೊಂಡಿತು. ನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ತೆರಳುವ ಮಾರ್ಗದಲ್ಲೂ ವಾಹನ ದಟ್ಟಣೆ ಕಂಡುಬಂದಿತು . ಬಿ.ನಾರಾಯಣಪುರ ಮುಖ್ಯ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಲೋರಿ ಜಂಕ್ಷನ್ ಕಡೆಗೆ ಸಂಚಾರ ದಟ್ಟಣೆ ಹೆಚ್ಚಾಯಿತು. ಮಾರತ್‌ಹಳ್ಳಿಯಿಂದ ಕಾಡುಬೀಸನಹಳ್ಳಿ ಕಡೆಗೂ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು.
ಮೇಲ್ಸೇತುವೆಗಳಲ್ಲೂ ನೀರು:
ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆ ಹಾಗೂ ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಯಿತು. ರಸ್ತೆ ಸ್ವಚ್ಛತೆ ಮತ್ತು ನೀರು ತೆರವು ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೆರಡು ದಿನ ಭಾರಿ ಮಳೆ:
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಇನ್ನೆರಡು ದಿನ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವೆಡೆ ಗಂಟೆಗೆ 60ರಿಂದ 70 ಕಿ.ಮೀ. ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯೂ ಇದೆ.
ಕರಾವಳಿ, ಉತ್ತರ ಒಳನಾಡು ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಳಗಾವಿ, ಧಾರವಾಡ, ಬೀದರ್, ಗದಗ, ಮೈಸೂರು, ಹಾಸನ, ಮಂಡ್ಯ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಬೆಂಗಳೂರಿನಲ್ಲೂ ಮುಂದಿನ ದಿನಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ.
4.1 ಸೆಂ.ಮೀ. ಮಳೆ:
ನಿನ್ನೆ ಬೆಳಗ್ಗೆಯಿಂದ ರಾತ್ರಿವರೆಗೆ ನಗರದಲ್ಲಿ ಸರಾಸರಿ 2 ಸೆಂ.ಮೀ. ಮಳೆಯಾಗಿದೆ. ಯಲಹಂಕ ಸುತ್ತಮುತ್ತ ಹೆಚ್ಚಿನ ಮಳೆ ದಾಖಲಾಗಿದೆ.
ಹೆಮ್ಮಿಗೆಪುರ, ಮೂಡಲಪಾಳ್ಯ, ನಾಗರಬಾವಿ ಹಾಗೂ ಉತ್ತರಹಳ್ಳಿಯಲ್ಲಿ ತಲಾ 4.1 ಸೆಂ.ಮೀ., ವಿಜಯನಗರದಲ್ಲಿ 2.8 ಸೆಂ.ಮೀ. ಮಳೆ ದಾಖಲಾಗಿದೆ.
