LatestTop Storiesಬೆಂಗಳೂರು-Bengaluru

ನರೇಂದ್ರ ಮೋದಿ ನಿರುದ್ಯೋಗದ ಪಿತಾಮಹ -ಹೆಚ್.ಎಸ್.ಮಂಜುನಾಥ್ ಗೌಡ

ಬೆಂಗಳೂರು.ಸೆ.18 – ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದು, ಅನುಷ್ಠಾನದಲ್ಲಿ ಸಂಪೂರ್ಣ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಜನ್ಮದಿನವನ್ನು ಯುವ ಕಾಂಗ್ರೆಸ್ ವಿಶ್ವ ನಿರುದ್ಯೋಗ ದಿನ ವನ್ನಾಗಿ ಆಚರಿಸುತ್ತಿದೆ ಎಂದು ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ತಿಳಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನಿAದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯೋಗಕ್ಕಾಗಿ ವರ್ಷಗಟ್ಟಲೆ ತಯಾರಿ ನಡೆಸುವ ಯುವಕರು ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನೇಮಕಾತಿ ವಿಳಂಬದಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ಯುವಕರ ಕೈಗೆ ಉದ್ಯೋಗ ನೀಡಲಾಗದ ಸರ್ಕಾರ ದೇಶದ ಭವಿಷ್ಯವನ್ನು ಹೇಗೆ ಕಟ್ಟುತ್ತದೆ?ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾದ ಮೋದಿಯವರನ್ನು ಮುಂದಿನ ಪೀಳಿಗೆ ನಿರುದ್ಯೋಗದ ಪಿತಾಮಹ ಎಂದು ಕರೆಯುವುದು ನಿಶ್ಚಿತ ಎಂದು ತಿಳಿಸಿದರು.

ನೀತಿ ಆಯೋಗದ ಇತ್ತೀಚಿನ ವಿಕಾಸ ಭಾರತ-2047 ವರದಿ ಪ್ರಕಾರ, ದೇಶದಲ್ಲಿ 15-29 ವರ್ಷದೊಳಗಿನ ಸುಮಾರು 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿ ತೊಡಗಿಸಿಕೊಂಡಿಲ್ಲ. ಜೊತೆಗೆ, ಕೇಂದ್ರ ಸರ್ಕಾರದ 80 ಸಚಿವಾಲಯ ಮತ್ತು ಇಲಾಖೆಗಳಲ್ಲೇ 8.23 ಲಕ್ಷಕ್ಕೂ ಹೆಚ್ಚು ಮಂಜೂರಾದ ನಾಗರಿಕ ಹುದ್ದೆಗಳು ಖಾಲಿ ಉಳಿದಿರುವುದು ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕು ಮುನ್ನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ವಿಡಂಬನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ಕೋರುವ ಪೋಸ್ಟರ್‌ಗಳು ಹಾಗೂ ಬ್ಯಾನರ್‌ಗಳನ್ನು ಬಿಡುಗಡೆ ಮಾಡಲಾಯಿತು.ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಈ ಪೋಸ್ಟರ್ ಮತ್ತು ಬ್ಯಾನರ್ ಬಿಡುಗಡೆ ಮಾಡಿದರು.

ಅಲ್ಲದೆ, ಕಾಂಗ್ರೆಸ್ ಕಾರ್ಯಕರ್ತರು, ಉದ್ಯೋಗ ಕೇಳಿದ ಯುವಕರಿಗೆ ಪಕೋಡಾ ನೀಡಿದ ಪ್ರಧಾನಿಗೆ ಜನ್ಮದಿನದ ಶುಭಾಶಯಗಳು!’,ಉದ್ಯೋಗ ಎಲ್ಲಿದೆ?ಎಂಬ ಪ್ರಶ್ನೆಗೆ 11 ವರ್ಷಗಳ ಮೌನ-ಮೋದಿಗೆ ಶುಭಾಶಯಗಳು!, ನಿರುದ್ಯೋಗದ ಪಿತಾಮಹ ನರೇಂದ್ರ ಮೋದಿಗೆ ಜನ್ಮದಿನದ ಶುಭಾಶಯಗಳು!

ಎಂಬ ಪ್ಲೇಕಾರ್ಡ್ ಹಿಡಿದು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.ಈ ವೇಳೆ ಕೆಪಿವೈಸಿಸಿ ರಾಜ್ಯ ಉಪಾಧ್ಯಕ್ಷೆ ದಿವ್ಯಾ, ಜಿಲ್ಲಾಧ್ಯಕ್ಷರಾದ ರಂಜಿತ್, ರಾಹುಲ್, ಪ್ರವೀಣ್ ಸೇರಿದಂತೆ ರಾಜ್ಯ ಪದಾಧಿಕಾರಿಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.

Share with Friends
author avatar
Digital Desk