LatestTop Storiesಚಾಮರಾಜನಗರ-Chamarajanagaraಜಿಲ್ಲಾ ಸುದ್ದಿಗಳು | District News

ರಾಮನಗರದಿಂದಲೇ ಸ್ಪರ್ಧೆ ಖಚಿತ :ನಿಖಿಲ್ ಕುಮಾರಸ್ವಾಮಿ

ರಾಮನಗರ.ಸೆ18 -ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸುವುದಾಗಿ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘೋಷಿಸಿದ್ದಾರೆ.

ರಾಮನಗರದ ನೂತನ ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸ್ಪರ್ಧೆ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪು ಕಾರ್ಯಕರ್ತರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅದನ್ನು ಉತ್ತಮ ಫಲಿತಾಂಶದ ಮೂಲಕ ಹೋಗಲಾಡಿಸಿ ಕಾರ್ಯಕರ್ತರಲ್ಲಿ ನೂತನ ಉತ್ಸಾಹ ತುಂಬಬೇಕಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರನ್ನು ನೋಡುವ ಗುರಿ ನಮ್ಮದಾಗಿದೆ ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿದೆ.ಪಕ್ಷದ ಸಂಘಟನೆಗಾಗಿ ದುಡಿದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು. ಈ ಕಚೇರಿಯ ಮೂಲಕ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಕೆಲವು ಕಡೆ ಜೆಡಿಎಸ್‌ಗೆ ಹಿನ್ನಡೆಯಾಗಿದೆ ನಿಜ, ಆದರೆ ರಾಜಕೀಯದಲ್ಲಿ ಹಿನ್ನಡೆ-ಮುನ್ನಡೆ ಶಾಶ್ವತವಲ್ಲ, ಅದು ತಾತ್ಕಾಲಿಕ. ಬದಲಾವಣೆಯೊಂದಿಗೆ ನಾವು ಮತ್ತೆ ಸಂಘಟಿತ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಶೀಘ್ರದಲ್ಲೇ ರಾಜ್ಯ ಪ್ರವಾಸದ ಬಗ್ಗೆ ತೀರ್ಮಾನ ಮಾಡುತ್ತೇನೆ.ಸರ್ಕಾರ ಬಂದು ಮೂರು ವರ್ಷವಾದರೂ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ.ಸರ್ಕಾರ ಕೇವಲ 102 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ.ಉಳಿದ ತಾಲೂಕುಗಳಲ್ಲಿ ಬರ ಇಲ್ಲವೇ? ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಲಿದ್ದೇನೆ ಎಂದು ಹೇಳಿದರು.

ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ಟೀಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು,ಅವರ ಹೇಳಿಕೆಗಳಿಗೆ ಉತ್ತರ ಕೊಡುವುದಿಲ್ಲ. ಕುಮಾರಣ್ಣನವರನ್ನು ನಿಂದಿಸಿದರೆ ಕೆಲವರಿಗೆ ಸ್ಥಾನ-ಮಾನ ಸಿಗುತ್ತದೆ.ಇದು ಜೆನ್-ಝಿ ಯುಗ, ಜನರು ಎಲ್ಲವನ್ನೂ ಗಮನಿಸುತ್ತಾರೆ. ಅಧಿಕಾರದಲ್ಲಿರುವವರು ಮೈಕ್ ಮೂಲಕವಲ್ಲ, ಕೆಲಸದ ಮೂಲಕ ಉತ್ತರ ಕೊಡಬೇಕು ಎಂದರು.

ಟಿ.ನರಸೀಪುರ ಹಾಗೂ ಮದ್ದೂರು ಪ್ರಕರಣಗಳ ಕುರಿತು ಮಾತನಾಡಿ,ಸರ್ಕಾರ ಒಂದು ಸಮುದಾಯ ಓಲೈಕೆ ಮಾಡಬಾರದು. ಹಿಂದೂ ಸಂಸ್ಕೃತಿ ಮತ್ತು ಆಚರಣೆಗೆ ಅಡ್ಡಿಪಡಿಸುವುದು ಸರಿಯಲ್ಲ.ಧಾರ್ಮಿಕ ನಂಬಿಕೆಗೆ ಧಕ್ಕೆ ಆಗದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Share with Friends
author avatar
Digital Desk