
ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ!
ಕಲಬುರಗಿ.ಸೆ.17- ನಗರದ ಹೈಕೋರ್ಟ್ ಕ್ರಾಸ್ ಬಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಮೆಯನ್ನು ರಾತ್ರೋರಾತ್ರಿ ಸ್ಥಾಪಿಸಿರುವ ಘಟನೆ ನಡೆದಿದೆ.
ಯಾವುದೇ ಅಧಿಕೃತ ಅನುಮತಿ ಪಡೆಯದೆ ಏಳೆಂಟು ಮಂದಿ ಸೇರಿಕೊಂಡು ಪ್ರತಿಮೆ ಸ್ಥಾಪಿಸಿದ್ದಾರೆ ಎನ್ನಲಾಗಿದ್ದು, ಘಟನೆ ಕುರಿತು ಜಿಲ್ಲಾಡಳಿತದ ಮುಂದಿನ ಕ್ರಮದ ಬಗ್ಗೆ ಕುತೂಹಲ ಮೂಡಿದೆ.
ಇದೇ ಸ್ಥಳದಲ್ಲಿ ಎರಡು-ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯ ಭಾವಚಿತ್ರದ ಬ್ಯಾನರ್ ಅಳವಡಿಸಿ ಸಿದ್ದರಾಮಯ್ಯ ಸರ್ಕಲ್ ನಿರ್ಮಿಸಲಾಗಿತ್ತು. ಆಗಲೂ ಅನುಮತಿ ಪಡೆಯದೆ ಸರ್ಕಲ್ ನಿರ್ಮಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.
ಸದ್ಯ ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಲಬುರಗಿ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸಿರುವುದು ಗಮನ ಸೆಳೆದಿದೆ. ಪ್ರತಿಮೆ ಸ್ಥಾಪಿಸಲಾದ ಸರ್ಕಲ್ ಮೂಲಕವೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಫಜಲಪುರಕ್ಕೆ ತೆರಳಲಿದ್ದಾರೆ .
ಅನುಮತಿ ಪಡೆಯದೆ ಪ್ರತಿಮೆ ಸ್ಥಾಪಿಸಿರುವುದು ದೃಢಪಟ್ಟಲ್ಲಿ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಇದೀಗ ಭಾರೀ ಕುತೂಹಲ ಮೂಡಿಸಿದೆ.
