
ಮಂತ್ರಾಲಯದಲ್ಲಿ 56.63 ಕೋಟಿ ಲೀಟರ್ ನೀರು ಸಂಗ್ರಹಿಸುವ ಕುಡಿಯುವ ನೀರಿನ ಯೋಜನೆಗೆ ಭೂಮಿ ಪೂಜೆ..!
ರಾಯಚೂರು: ಲಕ್ಷಾಂತರ ಭಕ್ತರ ಬಹುದಿನದ ಬೇಡಿಕೆಗೆ ಸ್ಪಂದನೆಯಾಗಿ, ಮಂತ್ರಾಲಯಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ವರ್ಷವಿಡೀ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆಗೆ ಇಂದು ಅದ್ಧೂರಿಯಾಗಿ ಭೂಮಿ ಪೂಜೆ ನೆರವೇರಿತು.
ರಾಘವೇಂದ್ರ ಮಠದ ಪೀಠಾಧಿಪತಿ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಮತ್ತು ವಿಶೇಷ ಪ್ರಾರ್ಥನೆಗಳೊಂದಿಗೆ ಕುಡಿಯುವ ನೀರಿನ ಯೋಜನೆಗೆ ಅಡಿಗಲ್ಲು ಹಾಕಲಾಯಿತು.
ಈ ಜನಪರ ಯೋಜನೆಗೆ HAL ಸಂಸ್ಥೆ CSR ಪಾಲುದಾರ ಆಗಿ ಆರ್ಥಿಕ ನೆರವು ನೀಡುತ್ತಿದೆ. ಯೋಜನೆಯ ಎಂಜಿನಿಯರಿಂಗ್ ಪಾಲುದಾರರಾಗಿ EIT Technologies ತಾಂತ್ರಿಕ ಬೆಂಬಲ ನೀಡಲಿದೆ.

ನೀರಿನ ಭದ್ರತೆಗೆ ಮಂತ್ರಾಲಯ ಮಠದಿಂದ ಇಟ್ಟಿರುವ ಈ ಮಹತ್ವದ ಹೆಜ್ಜೆ ಮುಂದಿನ ಪೀಳಿಗೆಗೂ ಅನುಕೂಲವಾಗಲಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದ ಮಂತ್ರಾಲಯಕ್ಕೆ ಈ ಯೋಜನೆ ಶಾಶ್ವತ ಪರಿಹಾರ ನೀಡಲಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಠದ ಹಿರಿಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, HAL ಮತ್ತು EIT Technologies ಕಂಪನಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಗಳು ಈ ಸಂದರ್ಭದಲ್ಲಿ ಮಾತನಾಡಿ “ಸೇವೆಯೇ ಮಧ್ವ ಸೇವೆ” ಎಂದು ಹೇಳಿ, ಭಕ್ತರ ಸೇವೆಗೆ ಈ ಯೋಜನೆ ಸಹಾಯಕವಾಗಲಿ ಎಂದು ಆಶೀರ್ವದಿಸಿದರು.
ಮಂತ್ರಾಲಯವು ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳವಾಗಿದ್ದು, ಪ್ರತಿದಿನ ಸಾವಿರಾರು ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ. ಈ ಹೊಸ ನೀರಿನ ಯೋಜನೆಯಿಂದ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುವ ನಿರೀಕ್ಷೆಯಿದೆ.
ಯೋಜನೆಯ ಕಾಮಗಾರಿಯನ್ನು ಮುಂದಿನ 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
