Crime NewsLatestTop Storiesಬೆಂಗಳೂರು ಗ್ರಾಮಾಂತರ

ವಿಷ ಕುಡಿದು ನವವಿವಾಹಿತೆ ಆತ್ಮಹತ್ಯೆ

ನೆಲಮಂಗಲ, ಜು.13 : ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲದ ಬಸವನಹಳ್ಳಿಯಲ್ಲಿ ನಡೆದಿದೆ.

ತನುಜಾ (31) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆಯಾಗಿದ್ದಾಳೆ.ಗೌರಿಬಿದನೂರಿನ ಬೀರಮ್ಮನಹಳ್ಳಿ ನಿವಾಸಿ ತನುಜಾ ಯಲಹಂಕದ ಮಾಯಸಂದ್ರ ನಿವಾಸಿ ರವೀಂದ್ರ ಒಂದೇ ಸ್ಥಳದಲ್ಲಿ ಕೆಲಸ ತೆರಳುತ್ತಿದ್ದರು. ಈ ವೇಳೆ ಇವರಿಬ್ಬರು ಪ್ರೇಮಿಸಿ ಇತ್ತೀಚಿಗೆ ಧರ್ಮಸ್ಥಳದಲ್ಲಿ ವಿವಾಹವಾಗಿದ್ದರು.

ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ತನುಜಾ

ಇನ್ನು ಮದುವೆಯ ನಂತರ, ಸ್ವಲ್ಪ ಸಮಯ ಕಳೆಯಲಿ, ಆಮೇಲೆ ನಮ್ಮ ಮನೆಯಲ್ಲಿ ವಿಷಯ ತಿಳಿಸುತ್ತೇನೆ ಎಂದು ಹೇಳಿದ್ದ ರವೀಂದ್ರ,ತನುಜಾಳನ್ನು ಯಲಹಂಕದ ಸಿಂಗಾಪುರದ ಬಾಡಿಗೆ ಮನೆಯೊಂದರಲ್ಲಿ ಇರಿಸಿದ್ದ.

ಈ ನಡುವೆ ತನುಜಾ ನಿನ್ನೆ ಪತಿ ರವೀಂದ್ರನಿಗೆ ಫೋನ್ ಮಾಡಿ, ಮನೆಗೆ ಬರುವಂತೆ ಕರೆದಿದ್ದಳು. ಆದರೆ ರವೀಂದ್ರ, ಈಗ ಬರಲು ಸಾಧ್ಯವಿಲ್ಲ, ನಾಳೆ ಬೆಳಗ್ಗೆ ಬರುತ್ತೇನೆ ಎಂದು ಹೇಳಿದ್ದ. ಇದರಿಂದ ಸಿಟ್ಟಿಗೆದ್ದ ತನುಜಾ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಳು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ರವೀಂದ್ರನಿಗೆ, ನಾನು ನೆಲಮಂಗಲದ ಬಸವನಹಳ್ಳಿಯಲ್ಲಿ ಕುಳಿತು ವಿಷ ಕುಡಿದಿದ್ದೇನೆ ಎಂದು ಮೆಸೇಜ್ ಕಳುಹಿಸಿದ್ದಳು. ಇದರಿಂದ ಗಾಬರಿಗೊಂಡ ರವೀಂದ್ರ ತಕ್ಷಣವೇ ಬಸವನಹಳ್ಳಿಗೆ ಬಂದಿದ್ದ. ಸ್ಥಳದಲ್ಲಿ ತನುಜಾ ಬಿದ್ದಿರುವುದನ್ನು ಕಂಡು, ತಕ್ಷಣವೇ ಆಕೆಯನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಅಷ್ಟರಲ್ಲಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.

ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Share with Friends
author avatar
Digital Desk