LatestTop Storiesರಾಜ್ಯ-Karnataka

ಕೆಪಿಎಸ್‌ಸಿ ಅಧ್ಯಕ್ಷರ ಅಮಾನತು,ಪ್ರಭುದೇವ್ ಹಂಗಾಮಿ ಅಧ್ಯಕ್ಷ

ಬೆಂಗಳೂರು,ಜು.13 : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿ, ತನಿಖೆಗೆ ಶಿಫಾರಸ್ಸು ಮಾಡಿದ್ದಾರೆ.
ಪುತ್ರಿಗೆ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಅಧಿಕಾರ ದುರುಪಯೋಗಪಡಿಸಿಕೊಂಡು ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರದಲ್ಲಿ ಸುಳ್ಳು ಆದಾಯ ನಮೂದಿಸಲು ಸಹಕರಿಸಿದ ಆರೋಪ ಎದುರಿಸುತ್ತಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡಿ ಹಿರಿಯ ಸದಸ್ಯ ಟಿ. ಪ್ರಭುದೇವ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ವಿರುದ್ಧ ಸ್ವಜನ ಪಕ್ಷಪಾತ, ಮಾಹಿತಿ ಬಹಿರಂಗಪಡಿಸದೇ ಇರುವುದು ಇತ್ಯಾದಿ ದೂರುಗಳು ಬಂದಿದ್ದು, ಅಧಿಕಾರ ದುರುಪಯೋಗಪಡಿಸಿಕೊಂಡು ಕಾನೂನುಬಾಹಿರವಾಗಿ ತಮ್ಮ ಪುತ್ರಿಯನ್ನುಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗೆ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಅವರ ನೇರ ಅವಲಂಬಿತರು ಕೆಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾಗ ಅಧ್ಯಕ್ಷರು ತಾವು ಈ ನೇಮಕಾತಿ ಪ್ರಕ್ರಿಯೆಯಿಂದ ದೂರವಿರಲು ಅಥವಾ ಹಿತಾಸಕ್ತಿ ಸಂಘರ್ಷವನ್ನು ಔಪಚಾರಿಕವಾಗಿ ಘೋಷಿಸಲು ವಿಫಲರಾಗಿದ್ದಾರೆ ಎಂದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ರಾಜ್ಯಪಾಲರ ಕಚೇರಿ ಪ್ರಕಟಣೆ ತಿಳಿಸಿದೆ.
ಇದಲ್ಲದೆ ಕುಟುಂಬದ ವಾರ್ಷಿಕ ಆದಾಯವನ್ನು ಕೇವಲ 40 ಸಾವಿರ ಎಂದು ಘೋಷಿಸಿ ಪ್ರಮಾಣ ಪತ್ರ ಪಡೆದಿದ್ದು, ವಾಸ್ತವ ಆದಾಯವನ್ನು ಮರೆಮಾಚಿ ಒಬಿಸಿ ಮೀಸಲಾತಿ ಮತ್ತು ಕೆನೆ ಪದರ ಲಾಭ ಪಡೆಯಲು ಯತ್ನಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ಆದೇಶದ ಪ್ರಕಾರ ಅವರ ಮಕ್ಕಳಿಗೆ ಒಬಿಸಿ ಮೀಸಲಾತಿ ಅನ್ವಯಿಸದಿದ್ದರೂ ಮಾಹಿತಿ ಮರೆಮಾಚಿ ಮೀಸಲಾತಿಯ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತಿರುವ ಆರೋಪವೂ ದಾಖಲಾಗಿದೆ. ಆದಾಯ, ಆಸ್ತಿ ವಿವರಗಳು ಸೇರಿದಂತೆ ಲಭ್ಯ ದಾಖಲೆಗಳು ಆರೋಪಗಳಿಗೆ ಪ್ರಾಥಮಿಕ ಬಲ ನೀಡುತ್ತಿದ್ದು, ಈ ಆರೋಪಗಳು ದುರ್ನಡೆತೆಗೆ ಸಮನಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ.
ನಿಸ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಅವರನ್ನು ಅಮಾನತು ಮಾಡಲಾಗಿದೆ ಎಂದು ರಾಜ್ಯಪಾಲರ ಆದೇಶದಲ್ಲಿ ತಿಳಿಸಲಾಗಿದೆ.
ರಾಷ್ಟ್ರಪತಿಗಳ ಮುಂದಿನ ಆದೇಶದವರೆಗೂ ಅಮಾನತು ಜಾರಿಯಲ್ಲಿರುವುದರಿಂದ ಈ ಅವಧಿಯಲ್ಲಿ ಕೆಪಿಎಸ್‌ಸಿ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆಯೋಗದ ವಿಶ್ವಾಸಾರ್ಹತೆ ಹಾಗೂ ನೇಮಕಾತಿ ಪ್ರತ್ರಿಯೆ ಪಾರದರ್ಶಕತೆಯ ಕಾಪಾಡುವ ನಿಟ್ಟಿನಿಲ್ಲಿ ರಾಜ್ಯಪಾಲು ಆದೇಶದಲ್ಲಿ ತಿಳಿಸಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿ ಹಿರಿಯ ಸದಸ್ಯ ಪ್ರಭುದೇವ ಅವರನ್ನು ನೇಮಕ ಮಾಡಲಾಗಿದೆ.

Share with Friends
author avatar
Digital Desk