ಕಣ್ಣೀರಿನ ಬಗ್ಗೆ ಲಘುವಾಗಿ ಮಾತನಾಡಿದ ಕಾಂಗ್ರೆಸ್ಸಿಗರಿಗೆ ದೇವೇಗೌಡರ ತಿರುಗೇಟು
ಮಂಡ್ಯ: ನಮ್ಮ ವಂಶ ಬಡತನದಿಂದ ಕಷ್ಟಸುಖ ಅರಿತು ಮೇಲೆ ಬಂದಿದೆ. ನಮ್ಮ ವಂಶಕ್ಕೆ ಈ ಕಣ್ಣೀರು ಬಳುವಳಿಯಾಗಿ ಬಂದಿದೆ ಎಂದು ಚನ್ನಪಟ್ಟಣ ಚುನಾವಣೆ ಪ್ರಚಾರದಲ್ಲಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕರಿಗೆಮಾಜಿ ಪ್ರಧಾನಿ ದೇವೇಗೌಡರು ತಿರುಗೇಟು ಕೊಟ್ಟಿದ್ದಾರೆ.
ಪಾಂಡವಪುರದ ಚಿನಕುರುಳಿ ಗ್ರಾಮದಲ್ಲಿ ಮಾಜಿ ಪ್ರಧಾನಿಗಳು ಮಾಧ್ಯಮಗಳ ಜತೆ ಮಾತನಾಡಿ, ಕಣ್ಣೀರ ಬಗ್ಗೆ ವ್ಯಂಗ್ಯವಾಡ್ತಿರೋ ಕೈ ನಾಯಕರ ವಿರುದ್ದ ಹರಿಹಾಯ್ದರು. ತಮ್ಮ ಬದುಕಿನ ಹಸಿವು, ಕಣ್ಣೀರನ್ನು ಅವರು ನೆನಪು ಮಾಡಿಕೊಂಡರು.
ನಮಗೆ ರೈತರ, ಬಡ ಜನರ ಕಷ್ಟ ಸುಖಗಳ ಅರಿವಿದೆ. ಅವರ ಕಷ್ಟಕ್ಕೆ ಸ್ಪಂದಿಸುವ ಹೃದಯ ಯಾರಿಗಿರುತ್ತೋ ಅವರಿಗೆ ಮಾತೃ ಹೃದಯ ಇರುತ್ತೆ. ಕಣ್ಣೀರಿನ ಬಗ್ಗೆ ವ್ಯಂಗ್ಯ ಮಾಡುವ ಜನರಿಗೆ ನಾನು ಇನ್ನೇನು ಹೇಳಲು ಬಯಸುವುದಿಲ್ಲ ಎಂದು ಅವರು ಹೇಳಿದರು.
ನಾನು ನನ್ನ ಕಡೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರ್ತಿನಿ. ಮೊಮ್ಮಗನಿಗಾಗಿ ಈಗ ನಾನು ರಾಜಕೀಯಕ್ಕೆ ಬಂದಿಲ್ಲ. ಒಂದು ಪ್ರಾದೇಶಿಕ ಪಕ್ಷ ಉಳಿಸಲು ನಾನು ಬಂದಿದ್ದೀನಿ. ಈ ಸರ್ಕಾರ ತೆಗೆಯುವವರೆಗೂ ನಾನು ನಿದ್ದೆ ಮಾಡಲ್ಲ. ಮೊಮ್ಮಗ ನಿಖಿಲ್ ಗೆದ್ದ ಮೇಲೆಯೂ ನಾನು ಮನೆಯಲ್ಲಿ ಮಲಗಲ್ಲ. ಆಮೇಲೆ ಕೂಡ ಹೋರಾಟ ಪಕ್ಷ ಕಟ್ಟುತ್ತೇನೆ ಎಂದರು.
ಡಿಕೆ ಶಿವಕುಮಾರ್ ಅವರು ಕಣ್ಣೀರು ಹಾಕಿರೋದು ಯಾವತ್ತಾದರೂ ನೋಡಿದ್ದೀರಾ?. ಕೊತ್ವಾಲ್ ರಾಮಚಂದ್ರನಿಂದ 100 ರೂಪಾಯಿಗೆ ಕೆಲಸ ಶುರು ಮಾಡಿದ್ದು ಈ ಡಿಕೆಶಿ. ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ ಅಂತಹವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಂತಹ ಪಕ್ಷದ ಅಧ್ಯಕ್ಷರಾಗಿರುವ ಡಿಕೆ ಯಾವತ್ತಾದರೂ ಕಣ್ಣೀರು ಹಾಕಿದ್ದಾರಾ? ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿನೂ ಕಣ್ಣೀರು ಹಾಕಿದ್ದಾರೆ.
ದೇಶಕ್ಕೆ ಅನ್ನ ಕೊಡುವ ರೈತನಿಗೆ ನೋವಾದಾಗ ಹೃದಯ ಮರುಗುತ್ತದೆ. ಅಂತವರಿಗೆ ಕಣ್ಣೀರು ಬರುತ್ತದೆ. ನನ್ನ ಮೊಮ್ಮಗ ಕಣ್ಣೀರು ಹಾಕಿದರ ಬಗ್ಗೆ ಮಾತಾಡುತ್ತಾರೆ. ನಮ್ಮ ವಂಶವೇ ಕಣ್ಣೀರು ಹಾಕುತ್ತದೆ. ನಮ್ಮ ಅಪ್ಪನಿಂದಲೇ ನಮಗೆ ಕಣ್ಣೀರು ಹಾಕೋದು ಬಂದಿದೆ. ಬಡತನವನ್ನು ನಾವು ಅನುಭವಿಸಿದ್ದೇವೆ. ಬಡವರ ಬಗ್ಗೆ ನಮಗೆ ಬೇಗೆ, ನೋವು ಇದೆ ಎಂದು ಮಾಜಿ ಪ್ರಧಾನಿಗಳು ಬೇಸರ ವ್ಯಕ್ತಪಡಿಸಿದರು.
