
ಟೇಕ್ ಆಫ್ ಆಗಬೇಕಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡರಾತ್ರಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಹಮದಾಬಾದ್ಗೆ ಟೇಕ್ ಆಫ್ ಆಗಲು ಸಜ್ಜಾಗುತ್ತಿದ್ದ ಇಂಡಿಗೋ ವಿಮಾನವೊಂದರಲ್ಲಿ ಬಾಂಬ್ ಬೆದರಿಕೆ ಸಂದೇಶ ಪತ್ತೆಯಾಗಿದ್ದು, ಪ್ರಯಾಣಿಕರು ಹಾಗೂ ಭದ್ರತಾ ಸಿಬ್ಬಂದಿ ಕೆಲ ಕಾಲ ಭೀತಿಯಿಂದ ಮುಳುಗುವಂತೆ ಮಾಡಿತ್ತು.
ಬೆದರಿಕೆ ಸಂದೇಶ ಸಿಗುತ್ತಿದ್ದಂತೆಯೇ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತಕ್ಷಣವೇ ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ತದನಂತರ ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ಪತ್ತೆ ದಳದವರು ಇಡೀ ವಿಮಾನವನ್ನು ಜಾಲಾಡಿ ಕಂಪ್ಲೀಟ್ ಪರಿಶೀಲನೆ ನಡೆಸಿದರು.
ಸುದೀರ್ಘ ತಪಾಸಣೆಯ ಬಳಿಕ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಇದೊಂದು ಹುಸಿ (ನಕಲಿ) ಬಾಂಬ್ ಬೆದರಿಕೆ ಸಂದೇಶ ಎಂದು ಭದ್ರತಾ ಸಂಸ್ಥೆಗಳು ದೃಢಪಡಿಸಿದವು.
ಸಂಚಾರಕ್ಕೆ ಸೆಕ್ಯುರಿಟಿ ಕ್ಲಿಯರೆನ್ಸ್ ನೀಡಿ, ವಿಮಾನವನ್ನು ಸುರಕ್ಷಿತವಾಗಿ ಅಹಮದಾಬಾದ್ಗೆ ಕಳುಹಿಸಿಕೊಡಲಾಯಿತು. ಈ ಕಿಡಿಗೇಡಿತನದ ಕೃತ್ಯ ಎಸಗಿದವರು ಯಾರು ಎಂಬ ಬಗ್ಗೆ ಸದ್ಯ ತನಿಖೆ ಮುಂದುವರಿದಿದೆ.
