
ಪತಿಯ ಬಿಡುಗಡೆಗಾಗಿ ಚಾಮುಂಡೇಶ್ವರಿ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ..!
ಮೈಸೂರು:ಸ್ಯಾಂಡಲ್‌ವುಡ್ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಮೊದಲ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಯ ಸಂಕಷ್ಟದಲ್ಲಿರುವ ಪತಿ ದರ್ಶನ್ ಅವರ ಶೀಘ್ರ ಬಿಡುಗಡೆಗಾಗಿ ಅವರು ನಾಡದೇವಿಯ ಬಳಿ ಪ್ರಾರ್ಥಿಸಿದ್ದಾರೆ.
ಪ್ರತಿ ವರ್ಷ ಆಷಾಢ ಮಾಸದಲ್ಲಿ ನಟ ದರ್ಶನ್ ಹಾಗೂ ಅವರ ಕುಟುಂಬಸ್ಥರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆಯುವುದು ವಾಡಿಕೆಯಾಗಿತ್ತು. ಆದರೆ ಈ ಬಾರಿ ದರ್ಶನ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದ್ದು, ಪತ್ನಿ ವಿಜಯಲಕ್ಷ್ಮಿ ಅವರು ಮಾತ್ರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.ಮೊದಲ ಆಷಾಢ ಶುಕ್ರವಾರದ ವಿಶೇಷ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮಿ ಅವರು VVIP ಸಾಲಿನಲ್ಲಿ ನಿಂತು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.

ಪತಿ ದರ್ಶನ್ ಅವರು ಎದುರಿಸುತ್ತಿರುವ ಕಾನೂನು ಸಂಕಷ್ಟಗಳು ದೂರವಾಗಿ, ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿ ಎಂದು ವಿಜಯಲಕ್ಷ್ಮಿ ಅವರು ದೇವಿಗೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಭಕ್ತರ ಗಮನ ಸೆಳೆದ ಭೇಟಿ: ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಹಸ್ರಾರು ಭಕ್ತರು ಹರಿದುಬಂದಿದ್ದು, ಈ ನಡುವೆ ವಿಜಯಲಕ್ಷ್ಮಿ ಅವರ ಭೇಟಿ ಸಾರ್ವಜನಿಕರ ಹಾಗೂ ದರ್ಶನ್ ಅಭಿಮಾನಿಗಳ ಗಮನ ಸೆಳೆಯಿತು.
ಪ್ರತಿ ವರ್ಷ ಸಡಗರದಿಂದ ಬೆಟ್ಟಕ್ಕೆ ಬರುತ್ತಿದ್ದ ದರ್ಶನ್ ಕುಟುಂಬ, ಈ ಬಾರಿ ಕಠಿಣ ಪರಿಸ್ಥಿತಿಯಲ್ಲಿ ದೇವಿಯ ಸನ್ನಿಧಾನಕ್ಕೆ ಬಂದಿರುವುದು ಭಕ್ತ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
