
ಶಾಕಿಂಗ್! 10 ಲಕ್ಷ ಮೌಲ್ಯದ ಆಭರಣ ಎಗರಿಸಿದ ಇಲಿ: ಜ್ಯುವೆಲರಿ ಶಾಪ್‌ನಲ್ಲಿ ಸಿನಿಮಾ ಕಥೆಯಂತಹ ಘಟನೆ
ತುಮಕೂರು: ಸಿನಿಮಾ ಕಥೆಯನ್ನೂ ಮೀರಿಸುವಂತಿದೆ ಈ ಕಹಾನಿ. ತುಮಕೂರು ನಗರದ ಪ್ರತಿಷ್ಠಿತ ಜ್ಯುವೆಲರಿ ಶಾಪ್‌ನಲ್ಲಿ ನಡೆದ ಕೃತ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ.ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜ್ಯುವೆಲರಿ ಶಾಪ್‌ನಲ್ಲಿ ಮಾಯವಾಗಿತ್ತು ವಜ್ರ ಖಚಿತ ಆಭರಣಗಳು. ತುಮಕೂರು ನಗರದ ಕಾಲ್ ಟೆಕ್ಸ್ ಸರ್ಕಲ್ ಬಳಿಯ ವಿಶ್ವಾಸ್ ಜ್ಯುವೆಲರಿ ಶಾಪ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಜ್ಯುವೆಲರಿ ಶಾಪ್‌ನ ಶಟರ್ ಮುರಿದಿರಲಿಲ್ಲ. ಶಾಪ್ ಒಳಗೆ ಯಾರ ಪ್ರವೇಶವೂ ಇರಲಿಲ್ಲ. ಹೀಗಿದ್ದರೂ ಶಾಪ್‌ನಲ್ಲಿ 50 ಗ್ರಾಂಗೂ ಅಧಿಕ ವಜ್ರ ಹಾಗೂ ಚಿನ್ನಾಭರಣ ನಾಪತ್ತೆಯಾಗಿತ್ತು. ಸುಮಾರು 10 ಲಕ್ಷ ಮೌಲ್ಯದ ಸರಗಳು, ಉಂಗುರಗಳು ಮಾಯವಾಗಿದ್ದವು.ಘಟನೆ ಕಂಡು ಕಂಗಲಾದ ಸಿಬ್ಬಂದಿಗಳು ಹಾಗೂ ಮಾಲೀಕರು ತಕ್ಷಣ ಸಿಸಿಟಿವಿ ಪರಿಶೀಲಿಸಿದರು. ಸಿಸಿಟಿವಿ ದೃಶ್ಯ ನೋಡಿ ಮಾಲೀಕ ಸಹಿತ ಸಿಬ್ಬಂದಿಗಳು ದಂಗಾದರು.

ಹೌದು, ಸೈಲೆಂಟ್ ಆಗಿ ಎಂಟ್ರಿ ಕೊಟ್ಟು 10 ಲಕ್ಷ ಮೌಲ್ಯದ ಆಭರಣಗಳನ್ನು ಮಾಯ ಮಾಡಿದ್ದು ಅದೊಂದು ಇಲಿ. ಸಿಸಿಟಿವಿಯಲ್ಲಿ ಇಲಿಯೊಂದು ಕೌಂಟರ್‌ನಲ್ಲಿ ಇಟ್ಟಿದ್ದ ಆಭರಣಗಳನ್ನು ಎಳೆದುಕೊಂಡು ಹೋಗಿ ತನ್ನ ಬಿಲದಲ್ಲಿ ಬಚ್ಚಿಡುತ್ತಿರುವ ದೃಶ್ಯ ಸೆರೆಯಾಗಿದೆ.
ಇಲಿಯ ಕೃತ್ಯ ಕಂಡ ಬಳಿಕ ಅದರ ಜಾಡು ಹಿಡಿದ ಜ್ಯುವೆಲರಿ ಶಾಪ್‌ನ ಸಿಬ್ಬಂದಿಗಳು ಇಲಿಯ ಬಿಲ ತೋಡಿದಾಗ ಬರೋಬ್ಬರಿ 10 ರಿಂಗ್, 3 ಸರ ಸೇರಿ ವಜ್ರ ಖಚಿತ ಚಿನ್ನಾಭರಣಗಳು ಪತ್ತೆಯಾದವು.
ಇಲಿ ಕದ್ದಿದ್ದ ಎಲ್ಲಾ ಆಭರಣಗಳು ಸುರಕ್ಷಿತವಾಗಿ ಸಿಕ್ಕ ಬಳಿಕ ಜ್ಯುವೆಲರಿ ಶಾಪ್ ಮಾಲೀಕ ಹಾಗೂ ಸಿಬ್ಬಂದಿಗಳು ಕೊನೆಗೂ ನಿಟ್ಟುಸಿರು ಬಿಟ್ಟರು. ಪೊಲೀಸರಿಗೆ ದೂರು ನೀಡುವ ಮೊದಲೇ ಆಭರಣ ಪತ್ತೆಯಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿತು.
“ಜೀವನದಲ್ಲಿ ಇಂತಹ ಘಟನೆ ಮೊದಲ ಬಾರಿಗೆ ನೋಡಿದೆವು. ಸಿಸಿಟಿವಿ ಇಲ್ಲದಿದ್ದರೆ ನಮಗೆ ನಂಬಲೂ ಆಗುತ್ತಿರಲಿಲ್ಲ” ಎಂದು ಮಾಲೀಕರು ತಿಳಿಸಿದರು.
