
ಮಹಾರಾಷ್ಟ್ರ ಮಳೆ ಅಬ್ಬರದ ನಡುವೆ ಅಥಣಿಯಲ್ಲಿ ಮಳೆಗಾಗಿ ಕಪ್ಪೆಗಳ ಮದುವೆ..!
ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ಮಳೆ ಅಬ್ಬರದಿಂದ ಬೆಳಗಾವಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದರೆ, ಇತ್ತ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆದಿದೆ. ಮಳೆಗಾಗಿ ಗ್ರಾಮಸ್ಥರು ಕಪ್ಪೆಗಳ ಮದುವೆ ಮಾಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಲಾಯಿತು. ಮಹಾರಾಷ್ಟ್ರ ಮಳೆಯಿಂದಾಗಿ ಬೆಳಗಾವಿ ನದಿಗಳು ಉಕ್ಕಿ ಹರಿಯುತ್ತಿರುವ ಮತ್ತು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆಯೂ, ಇಲ್ಲಿನ ಕೆಲ ಭಾಗಗಳಲ್ಲಿ ಇನ್ನೂ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಈ ಸಂಪ್ರದಾಯ ಆಚರಿಸಲಾಯಿತು.ಗ್ರಾಮದ ವಿಜಿ ರಾಮಜಿ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಂದ ಈ ಕಪ್ಪೆಗಳ ಮದುವೆ ನೆರವೇರಿಸಲಾಯಿತು.
ಮಳೆಯಾಗದ ಹಿನ್ನೆಲೆ ಕಪ್ಪೆಗಳ ಮದುವೆ ಮಾಡಿದ್ರೆ ಮಳೆಯಾಗುತ್ತೆ ಎಂಬ ನಂಬಿಕೆಯಲ್ಲಿ ಬಿಡುವಿನ ಸಮಯದಲ್ಲಿ ಕಾರ್ಮಿಕರು ಕಪ್ಪೆಗಳನ್ನು ಹಿಡಿದು ಮದುವೆ ಮಾಡಿಸಿದ್ದಾರೆ.ಸಂಪ್ರದಾಯದಂತೆ ಕಪ್ಪೆ ಜೋಡಿಗೆ ಸುರುಗಿ ನೀರು ಹಾಕಿ ವಿವಾಹ ನೆರವೇರಿಸಿ, ಮಳೆರಾಯನ ಆಗಮನಕ್ಕೆ ಪ್ರಾರ್ಥನೆ ಸಲ್ಲಿಸಿದರು. ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ ಮದುವೆ ಮಾಡಿ ಊರಿಗೆ ಒಳ್ಳೆಯದಾಗಲಿ ಎಂದು ಹರಕೆ ಹೊತ್ತರು.
ಕಪ್ಪೆಗಳ ಮದುವೆ ಮುಗಿದ ಬಳಿಕ ಊರಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಉತ್ತಮ ಮಳೆಯಾಗಲಿ ಎಂದು ಬೇಡಿಕೊಂಡರು.ರೈತರು ಹೆಚ್ಚಾಗಿ ಅವಲಂಬಿಸಿರುವ ಈ ಭಾಗದಲ್ಲಿ ಮಳೆ ವಿಳಂಬವಾದಾಗ ಕಪ್ಪೆಗಳ ಮದುವೆ ಮಾಡಿಸುವ ಹಳೆಯ ನಂಬಿಕೆ ಇಂದಿಗೂ ಚಾಲ್ತಿಯಲ್ಲಿದೆ. ಪ್ರಕೃತಿಯನ್ನು ಪ್ರಸನ್ನಗೊಳಿಸಿ ಮಳೆ ತರುವ ಪ್ರಯತ್ನವಾಗಿ ಈ ಆಚರಣೆಯನ್ನು ಮಾಡಲಾಗುತ್ತದೆ.
