
ಬೆಂಗಳೂರು ವಾಹನ ಸವಾರರಿಗೆ ಬಿಗ್ ಶಾಕ್: 3 ತಿಂಗಳು K.R. ಮಾರ್ಕೆಟ್ ಮೇಲ್ಸೇತುವೆ ಬಂದ್..!
ಬೆಂಗಳೂರು: ನಗರದ ಪ್ರಮುಖ ರಸ್ತೆಯೊಂದನ್ನು ಮುಚ್ಚಿರುವುದರಿಂದ ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದೆ. ಸಿ.ಟಿ.ಎನ್. ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಮುಂದಿನ 3 ತಿಂಗಳು K.R. ಮಾರ್ಕೆಟ್ ಮೇಲ್ಸೇತುವೆ ಸಂಪೂರ್ಣವಾಗಿ ಬಂದ್ ಆಗಲಿದೆ.ಸುಲ್ತಾನ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ K.R. ಮಾರ್ಕೆಟ್ ಮೇಲ್ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಸಾಮಾನ್ಯವಾಗಿ ಮೇಲ್ಸೇತುವೆ ಮೂಲಕ ಹೆಚ್ಚು ಪ್ರಯಾಣಿಕರು ಓಡಾಟ ನಡೆಸುತ್ತಾರೆ. ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ, ವಾಣಿವಿಲಾಸ ಆಸ್ಪತ್ರೆಗೆ ಹೋಗುವವರು, ಚಾಮರಾಜಪೇಟೆ, ಬಸವನಗುಡಿಗೆ ಹೋಗುವವರ ಸಂಚಾರಕ್ಕೆ ಈ ಮೇಲ್ಸೇತುವೆ ಪ್ರಮುಖ ಸಂಪರ್ಕ ಕಲ್ಪಿಸುತ್ತಿತ್ತು.ರಸ್ತೆ ಬಂದ್ ಆಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಈಗಾಗಲೇ ಆ ಭಾಗದಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ. ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸರು ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಬಳಸುವಂತೆ ಮನವಿ ಮಾಡಿದ್ದಾರೆ.

ಪರ್ಯಾಯ ಮಾರ್ಗ:
- ಸಿಟಿ ಮಾರ್ಕೆಟ್ ಕಡೆಯಿಂದ ಹೋಗುವವರು: ಕಲಾಸಿಪಾಳ್ಯ, ಟೌನ್ ಹಾಲ್ ಮಾರ್ಗ
- ಚಾಮರಾಜಪೇಟೆ, ಬಸವನಗುಡಿ ಕಡೆ ಹೋಗುವವರು: ಕೆಂಪೇಗೌಡ ರಸ್ತೆ, ಮೈಸೂರು ರಸ್ತೆ ಮಾರ್ಗ
ಕಾಮಗಾರಿ ಪೂರ್ಣಗೊಳ್ಳಲು ಮುಂದಿನ 3 ತಿಂಗಳು ಬೇಕಾಗಲಿದೆ. ಈ ಅವಧಿಯಲ್ಲಿ ಆ ಭಾಗದಲ್ಲಿ ಟ್ರಾಫಿಕ್ ಹೆಚ್ಚುವ ಸಾಧ್ಯತೆ ಇದೆ. ಆಸ್ಪತ್ರೆಗೆ ಹೋಗುವ ರೋಗಿಗಳು ಮತ್ತು ಆಂಬ್ಯುಲೆನ್ಸ್‌ಗಳಿಗೆ ತೊಂದರೆಯಾಗದಂತೆ ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಾಹನ ಸವಾರರು ಸಮಯಕ್ಕೆ ಮುಂಚಿತವಾಗಿ ಹೊರಡುವಂತೆ ಮತ್ತು ಟ್ರಾಫಿಕ್ ನಿಯಮ ಪಾಲಿಸುವಂತೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.
