Latestಬಾಗಲಕೋಟೆ

ಬಸ್ ನಿಲುಗಡೆ ಇಲ್ಲದೇ ಪರದಾಟ – ಹಂಗರಗಿ ಕ್ರಾಸ್‌ನಲ್ಲಿ ವಿದ್ಯಾರ್ಥಿಗಳ ರಸ್ತೆ ತಡೆ ಪ್ರತಿಭಟನೆ..!

ಬಾಗಲಕೋಟೆ: ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ಲಿಸದೇ ಹೋಗುತ್ತಿರುವುದರಿಂದ ಪರದಾಡುತ್ತಿರುವ ವಿದ್ಯಾರ್ಥಿಗಳು ಇಂದು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಂಗರಗಿ ಕ್ರಾಸ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಹಂಗರಗಿ, ಖಾಜಿಭೂದಿಹಾಳ, ಹಿರೇಬೂದಿಹಾಳ, ಲಕ್ಕಸಕೊಪ್ಪ ಹಾಗೂ ಜಮ್ಮನಕಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿದಿನ ಬಾಗಲಕೋಟೆಗೆ ಶಾಲೆ-ಕಾಲೇಜಿಗೆ ತೆರಳುತ್ತಾರೆ.

ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳು ಹಂಗರಗಿ ಕ್ರಾಸ್‌ನಲ್ಲಿ ನಿಲ್ಲಿಸದೆ ಸಾಗುತ್ತಿರುವುದರಿಂದ ವಿದ್ಯಾರ್ಥಿಗಳು ಪ್ರತಿದಿನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.ಬಸ್ ನಿಲುಗಡೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಇಂದು ರಸ್ತೆ ತಡೆದು ಪ್ರತಿಭಟನೆ ನಡೆಸಿ, ಕೆಎಸ್‌ಆರ್‌ಟಿಸಿ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಈ ಹಿಂದೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿನಿಯರು ಇದೇ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಆಗ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ ಕರ್ನಾಟಕ ಸ್ವಾಭಿಮಾನಿ ವೇದಿಕೆ – ಕನ್ನಡಿಗರ ಧ್ವನಿ ಸಂಘಟನೆಯು ಕೂಡ ಬಾಗಲಕೋಟೆ ವಿಭಾಗದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿತ್ತು ಎಂದು ತಿಳಿದುಬಂದಿದೆ.

ಪ್ರತಿಭಟನಾಕಾರರು ಬಾದಾಮಿ ಕ್ಷೇತ್ರದ ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಅವರು ವಿದ್ಯಾರ್ಥಿಗಳ ಸಮಸ್ಯೆಗೆ ಗಮನಹರಿಸಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಂಗರಗಿ ಕ್ರಾಸ್‌ನಲ್ಲಿ ಬಸ್ ನಿಲುಗಡೆಗೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.ವಿದ್ಯಾರ್ಥಿಗಳ ಈ ನ್ಯಾಯಯುತ ಬೇಡಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ? ಹಂಗರಗಿ ಕ್ರಾಸ್‌ನಲ್ಲಿ ಬಸ್ ನಿಲುಗಡೆ ವ್ಯವಸ್ಥೆ ಜಾರಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Share with Friends
author avatar
Digital Desk