
ಮುಂಗಾರು ಆರ್ಭಟ; ಡ್ಯಾಂಗಳ ನೀರಿನ ಮಟ್ಟ ಏರಿಕೆ
ಬೆಂಗಳೂರು,ಜು.9 : ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಕೆಲವು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ.
ಸದ್ಯ ಕೊಡಗು ಜಿಲ್ಲೆಯಲ್ಲಿ ಮುಂಗಾರು ಆರ್ಭಟ ಮುಂದುವರೆದಿರುವ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಂದೇ ದಿನದಲ್ಲಿ ಸುಮಾರು 1.5 ಟಿಎಂಸಿ ನೀರು(17,361 ಕ್ಯೂಸೆಕ್) ಸಂಗ್ರಹವಾಗಿದ್ದು, ಡ್ಯಾಂನ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳ ಕಂಡಿದೆ.
ಇನ್ನು ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು , ಕೆಆರ್ಎಸ್ ಡ್ಯಾಂಗೆ ಒಂದೇ ದಿನದಲ್ಲಿ 5,000 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ.ಅಲ್ಲದೆ, ಡ್ಯಾಂನಲ್ಲಿ 13.512 ಟಿಎಂಸಿ ನೀರು ಶೇಖರಣೆಯಾಗಿದೆ. ಇದೇ ರೀತಿ ಒಳಹರಿವು ಹೆಚ್ಚಾದರೆ ಕೆಆರ್ಎಸ್ ಡ್ಯಾಂ ಭರ್ತಿಯಾಗಲಿದೆ.

ಇದಲ್ಲದೆ, ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮತ್ತೆ ತನ್ನ ಅಬ್ಬರ ತೋರಲು ಆರಂಭಿಸಿದ್ದು,ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಜೀವನಾಡಿಯಾದ ಸ್ವರ್ಣಾ ನದಿ ಇದೀಗ ಮೈದುಂಬಿ ಹರಿಯುತ್ತಿದೆ. ಹಿರಿಯಡ್ಕ ಸಮೀಪದ ಬಜೆ ಡ್ಯಾಂ ಕೂಡ ಸಂಪೂರ್ಣ ಭರ್ತಿಯಾಗಿ ನೀರು ಹರಿಬಿಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ ಮಳೆಯ ಕೊರತೆ ಕಂಡುಬAದಿದ್ದರೂ, ಪಶ್ಚಿಮ ಘಟ್ಟದಲ್ಲಿ ಸುರಿದ ಉತ್ತಮ ಮಳೆಯ ಪರಿಣಾಮ ಜಲಾಶಯಗಳು ಮತ್ತು ನದಿಗಳು ತುಂಬಿ ಹರಿಯುತ್ತಿವೆ.
ಇದೇ ವೇಳೆ ಸ್ವರ್ಣಾ ಮಾತ್ರವಲ್ಲ, ಬ್ರಹ್ಮಾವರದ ಸೀತಾನದಿ, ಪಾಪನಾಶಿನಿ ಹಾಗೂ ಪಿನಾಕಿನಿ ನದಿಗಳಲ್ಲೂ ನೀರಿನ ಹರಿವು ಹೆಚ್ಚಾಗಿದೆ. ಒಂದು ತಿಂಗಳು ತಡವಾಗಿ ಸುರಿದ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಭತ್ತದ ನಾಟಿ ಸೇರಿದಂತೆ ಕೃಷಿ ಚಟುವಟಿಕೆಗಳು ಮತ್ತೆ ವೇಗ ಪಡೆದುಕೊಂಡಿವೆ
