
ಚುನಾವಣಾ ಆಯೋಗದ ವಿರುದ್ಧ ಪ್ರಕಾಶ್ ರಾಜ್ ಕಿಡಿ
ಬೆಂಗಳೂರು.ಆ.13: ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಕೈ ಬಿಟ್ಟಿದ್ದಕ್ಕೆ ಚುನಾವಣಾ ಆಯೋಗದ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.
ತಮ್ಮ ಹೇಳಿಕೆಯ ಎರಡನೇ ವಿಡಿಯೋ ಬಿಡುಗಡೆ ಮಾಡಿರುವ ನಟ ಪ್ರಕಾಶ್ ರಾಜ್ , ಚುನಾವಣಾ ಆಯೋಗಕ್ಕೆ ಹಲವು ಪ್ರಶ್ನೆ ಕೇಳಿದ್ದಾರೆ.
ನಿಮ್ಮ ವೆಬ್ಸೈಟ್ನಲ್ಲಿ ನನ್ನ ಮತದಾರರ ಗುರುತಿನ ಚೀಟಿ ಖಾಯಂ ಆಗಿ ವರ್ಗಾವಣೆಯಾಗಿದೆ ಹಾಗಾಗಿ ಫಾರ್ಮ್ 6 ಭರ್ತಿ ಮಾಡಿ ಹೊಸ ಐಡಿಗೆ ಅರ್ಜಿ ಸಲ್ಲಿಸಿ ಎಂದು ತೋರಿಸಿದ್ದು ನಿಜವಲ್ಲವೇ?ಈ ವಿಷಯವನ್ನು ನಾನು ಪ್ರಸ್ತಾಪಿಸಿ ಲಕ್ಷಾಂತರ ಜನರಿಗೆ ತಲುಪಿದ ಕೆಲವೇ ಗಂಟೆಗಳಲ್ಲಿ, ಅಧಿಕಾರಿಗಳು ನನಗೆ ಕರೆ ಮಾಡಿ ತಪ್ಪಾಗಿದೆ, ಸರಿಪಡಿಸುತ್ತೇವೆ ಎಂದು ಹೇಳಿ, ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲು ವಿನಂತಿಸಿದ್ದು ಹೌದಲ್ಲವೇ?.ಆದರೆ ಅದೇ ದಿನ ಸಂಜೆ ಪ್ರೆಸ್ಮೀಟ್ ಕರೆದು ಅದು ವರ್ಗಾವಣೆಯಾಗಿದೆ ಡಿಲೀಟ್ ಆಗಿಲ್ಲ ಎಂದು ಸುಳ್ಳು ಹೇಳಿದಿರಿ ಎಂದು ಕಿಡಿಕಾರಿದ್ದಾರೆ.
ವಿಷಯ ಕೈಮೀರಿ ಹೋದ ತಕ್ಷಣ ರಾತ್ರಿ 8:30ಕ್ಕೆ ಬಿಎಲ್ಒ ನೌಕರರನ್ನು ಕ್ಯಾಮೆರಾದೊಂದಿಗೆ ನನ್ನ ಹಳೆಯ ಮನೆ ವಿಳಾಸಕ್ಕೆ ಕಳುಹಿಸಿ,ನೆರೆಹೊರೆಯವರನ್ನು ಕರೆದು ಮಹಜರು ನಡೆಸುವ ನಾಟಕ ಮಾಡಿದಿರಿ. ನಂತರ ಅದನ್ನು ಗೋದಿ ಮೀಡಿಯಾ ಹಾಗೂ ಬಿಜೆಪಿ ಹ್ಯಾಂಡಲ್ಗಳಿಗೆ ನೀಡಿ ಪ್ರಕಾಶ್ ರಾಜ್ ಹೇಳಿದ್ದು ತಪ್ಪು ಎಂದು ಬಿಂಬಿಸಲು ಯತ್ನಿಸಿದಿರಿ. ನಾನು ನನ್ನ ವೃತ್ತಿಯಿಂದಾಗಿ ನಟ-ಸೆಲೆಬ್ರಿಟಿಯಾಗಿರಬಹುದು. ಆದರೆ ಈ ನಾಗರಿಕನಾಗಿ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ನಾನು ಸಮಾನ. ಈ ಹೋರಾಟ ಪ್ರತಿಯೊಬ್ಬ ನಾಗರಿಕನ ಆತ್ಮಗೌರವ ಮತ್ತು ಮತದಾನದ ಹಕ್ಕಿನ ಹೋರಾಟವಾಗಿದೆ. ಐದು ವರ್ಷಕ್ಕೊಮ್ಮೆ ಮತದಾರರ ಮುಂದೆ ಬಂದು ಓಟಿಗಾಗಿ ಕೈಮುಗಿದು ಬೇಡುತ್ತೀರಿ. ಆದರೆ ಈಗ ಅದೇ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಸಾಲಿನಲ್ಲಿ ನಿಂತು ಭಿಕ್ಷೆ ಬೇಡುವಂತೆ ಮಾಡುತ್ತಿದ್ದೀರಲ್ಲಾ? ಇದೇನು ನಾಟಕ? ಇದೇನು ರಾಜಕೀಯ? ನಿಮ್ಮ ಅಜೆಂಡಾ ಏನು? ಎಂದು ಪ್ರಶ್ನಿಸಿದ್ದಾರೆ.
ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಲಾಗಿದೆ ಎಂದು ವಿಡಿಯೋ ಮೂಲಕ ಪ್ರಕಾಶ್ ರಾಜ್ ಆರೋಪ ಮಾಡಿದ್ದರು. ಈ ಆರೋಪವನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ತಳ್ಳಿಹಾಕಿ ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿತ್ತು.
