ನಾಲ್ಕೇ ತಿಂಗಳಲ್ಲಿ 22 ಮಂದಿಗೆ ಗಲ್ಲು ಶಿಕ್ಷೆ: ಜಡ್ಜ್ ಕೋರ್ಟ್ನಿಂದ 100 ಕೊಲೆ ಪ್ರಕರಣಗಳು ಬೇರೆ ಪೀಠಕ್ಕೆ ವರ್ಗಾವಣೆ
ನಾಲ್ಕೇ ತಿಂಗಳಲ್ಲಿ 10 ಪ್ರಕರಣಗಳಲ್ಲಿ 22 ಮಂದಿಗೆ ಮರಣದಂಡನೆ; ಆತಂಕದ ನಡುವೆ 100 ಕೊಲೆ ಪ್ರಕರಣಗಳು ಬೇರೆ ಪೀಠಕ್ಕೆ ವರ್ಗಾವಣೆ

ಲಖನೌ: ಉತ್ತರ ಪ್ರದೇಶದ ಮುಜಫ್ಫರ್ನಗರದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 10 ಪ್ರತ್ಯೇಕ ಪ್ರಕರಣಗಳಲ್ಲಿ 22 ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಅವರ ನ್ಯಾಯಾಲಯದಲ್ಲಿದ್ದ ಸುಮಾರು 100 ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಇದೀಗ ಬೇರೆ ಪೀಠಕ್ಕೆ ವರ್ಗಾಯಿಸಲಾಗಿದೆ.
ರವಿ ಕುಮಾರ್ ದಿವಾಕರ್ ಅವರು ಮುಜಫ್ಫರ್ನಗರದ ಫಾಸ್ಟ್ಟ್ರ್ಯಾಕ್ ಕೋರ್ಟ್ನಲ್ಲಿ ಹಲವು ಕೊಲೆ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದರು. ಕಳೆದ ಏಪ್ರಿಲ್ನಿಂದ ನಾಲ್ಕು ತಿಂಗಳ ಅವಧಿಯಲ್ಲಿ 10 ಪ್ರಕರಣಗಳಲ್ಲಿ ಒಟ್ಟು 22 ಅಪರಾಧಿಗಳಿಗೆ ಮರಣದಂಡನೆ ವಿಧಿಸಿರುವುದು ಗಮನ ಸೆಳೆದಿದೆ.
ಈ ಹಿನ್ನೆಲೆಯಲ್ಲಿ, ಅವರ ಮುಂದೆ ಬಾಕಿ ಇದ್ದ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಒಳಪಡಬಹುದಾದ ಅಪರಾಧಗಳಿಗೆ ಸಂಬಂಧಿಸಿದ ಸುಮಾರು 100 ಪ್ರಕರಣಗಳನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಕುಮಾರ್ ಸಿಂಗ್ ಅವರ ನ್ಯಾಯಾಲಯಕ್ಕೆ ಆಡಳಿತಾತ್ಮಕ ಆದೇಶದ ಮೂಲಕ ವರ್ಗಾಯಿಸಲಾಗಿದೆ ಎಂದು ಸರ್ಕಾರಿ ವಕೀಲ ಕುಲದೀಪ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಮೋದ್ ತ್ಯಾಗಿ ಅವರ ಪ್ರಕಾರ, ಒಂದೇ ನ್ಯಾಯಾಲಯದಲ್ಲಿ ಸತತವಾಗಿ ಮರಣದಂಡನೆ ತೀರ್ಪುಗಳು ಬರುತ್ತಿರುವ ಹಿನ್ನೆಲೆಯಲ್ಲಿ ವಕೀಲರು ಹಾಗೂ ದಾವೆದಾರರಲ್ಲಿ ಆತಂಕ ಉಂಟಾಗಿತ್ತು. ನ್ಯಾಯಾಲಯವು ಪ್ರತಿಯೊಂದು ಪ್ರಕರಣದಲ್ಲೂ ಗರಿಷ್ಠ ಶಿಕ್ಷೆ ವಿಧಿಸುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆದಿದ್ದವು.
ಆದರೆ, ಪ್ರಕರಣಗಳ ವರ್ಗಾವಣೆ ನ್ಯಾಯಾಧೀಶರು ತಪ್ಪು ತೀರ್ಪು ನೀಡಿದ್ದಾರೆ ಎಂಬ ಕಾರಣಕ್ಕಾಗಿ ಅಲ್ಲ, ಆಡಳಿತಾತ್ಮಕ ನಿರ್ಧಾರದ ಮೂಲಕ ಬಾಕಿ ಪ್ರಕರಣಗಳನ್ನು ಮತ್ತೊಂದು ನ್ಯಾಯಾಲಯಕ್ಕೆ ಹಂಚಲಾಗಿದೆ ಎಂಬುದು ಅಧಿಕಾರಿಗಳ ಹೇಳಿಕೆಯಾಗಿದೆ.
ಯಾರು ಈ ರವಿ ಕುಮಾರ್ ದಿವಾಕರ್?
ರವಿ ಕುಮಾರ್ ದಿವಾಕರ್ ಅವರು ಉತ್ತರ ಪ್ರದೇಶದ ನ್ಯಾಯಾಂಗ ಸೇವೆಯ ಹಿರಿಯ ನ್ಯಾಯಾಧೀಶರಾಗಿದ್ದು, 2022ರಲ್ಲಿ ವಾರಾಣಸಿಯ ಜ್ಞಾನವಾಪಿ ಸಂಕೀರ್ಣದ ವಿಡಿಯೋಗ್ರಾಫಿಕ್ ಸಮೀಕ್ಷೆಗೆ ಆದೇಶ ನೀಡಿದ ಪ್ರಕರಣದಿಂದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು. ಅಲಹಾಬಾದ್ ಹೈಕೋರ್ಟ್ನ ಅಧಿಕೃತ ದಾಖಲೆಯ ಪ್ರಕಾರ, ಅವರು 2009ರಲ್ಲಿ ನ್ಯಾಯಾಂಗ ಸೇವೆಗೆ ಸೇರ್ಪಡೆಯಾಗಿದ್ದಾರೆ.
ಮುಜಫ್ಫರ್ನಗರದಲ್ಲಿ ಅವರ ಇತ್ತೀಚಿನ ಕಠಿಣ ತೀರ್ಪುಗಳು ಮತ್ತೆ ಚರ್ಚೆಗೆ ಕಾರಣವಾಗಿವೆ. ವಿಶೇಷವಾಗಿ, ಮರಣದಂಡನೆ ವಿಧಿಸುವ ಸಂದರ್ಭದಲ್ಲಿ ಅನ್ವಯವಾಗುವ ಅತ್ಯಂತ ಅಪರೂಪದ ಪ್ರಕರಣ’ತತ್ವದ ಕುರಿತೂ ಕಾನೂನು ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಇದೀಗ ಸುಮಾರು 100 ಪ್ರಕರಣಗಳು ಬೇರೆ ಪೀಠಕ್ಕೆ ವರ್ಗಾವಣೆಯಾಗಿರುವುದು ನ್ಯಾಯಾಂಗ ವಲಯದಲ್ಲಿ ಮತ್ತಷ್ಟು ಗಮನ ಸೆಳೆದಿದೆ.
