
ಹೆಂಡತಿ ಮೇಲಿನ ಕೋಪಕ್ಕೆ ಮಕ್ಕಳನ್ನು ಕಾಲುವೆಗೆ ಎಸೆದು ಕೊಂದ ಪಾಪಿ ಗಂಡ
ಯಾದಗಿರಿ ಬ್ರೇಕಿಂಗ್: ಗಂಡ-ಹೆಂಡತಿ ನಡುವಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿರುವ ಆಘಾತಕಾರಿ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಬಳಿ ನಡೆದಿದೆ.
ಗಂಗನಾಳ ಗ್ರಾಮದ ಶಾಂತಪ್ಪ ಬಿರಾದಾರ್ ಎಂಬಾತ ತನ್ನ ಮೂವರು ಮಕ್ಕಳನ್ನು ಬೈಕ್ನಲ್ಲಿ ಕೂರಿಸಿಕೊಂಡು ಮನೆಯಿಂದ ಹೊರಟಿದ್ದ ಎನ್ನಲಾಗಿದೆ. ಬಳಿಕ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಘಟನೆಯಲ್ಲಿ ಸಾನ್ವಿ (9) ಹಾಗೂ ಸೃಜನ್ (2) ಮೃತಪಟ್ಟಿದ್ದಾರೆ. ಮತ್ತೊಬ್ಬ ಮಗಳನ್ನು ತಾಯಿಯ ಆಶ್ರಯಕ್ಕೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.
ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಕಾಲುವೆಯಲ್ಲಿ ಮಕ್ಕಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಿಪಿಐ ದೀಪಕ್ ಬೂಸರೆಡ್ಡಿ ನೇತೃತ್ವದಲ್ಲಿ ಶೋಧ ಹಾಗೂ ತನಿಖಾ ಕಾರ್ಯಾಚರಣೆ ಮುಂದುವರೆದಿದೆ.
