
ಬಂಗಿ ಕುಂಟದಲ್ಲಿ ಪೂಜಾ ಸಾಮಗ್ರಿ ಅಂಗಡಿಯಲ್ಲಿ ಬೆಂಕಿ: ಲಕ್ಷಾಂತರ ನಷ್ಟ..!
ರಾಯಚೂರು: ನಗರದ ಬಂಗಿ ಕುಂಟದಲ್ಲಿ ಇರುವ ಪೂಜಾ ಸಾಮಗ್ರಿ ಅಂಗಡಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ.
ನಗರದ ಸದರ್ ಬಜಾರ್ ಪೋಲೀಸ್ ಠಾಣಾ ವ್ಯಾಪ್ತಿಯ ಬಂಗಿ ಕುಂಟದಲ್ಲಿರುವ ಪೂಜಾ ಸಾಮಗ್ರಿಯ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ.
ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್‌ನಿಂದಾದ ಘಟನೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಆದಾಗ್ಯೂ ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಹೊತ್ತಿ ಉರಿದ ಬೆಂಕಿಯಿಂದ ಅಂಗಡಿಯಲ್ಲಿದ್ದ ಅಗರಬತ್ತಿ, ದೀಪ, ಹೂವು, ಪೂಜಾ ಸಾಮಗ್ರಿಗಳು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿವೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು. ಸುಮಾರು 1 ಗಂಟೆಗಳ ಕಾಲ ಹೋರಾಡಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಬೆಳ್ಳಂಬೆಳಗ್ಗೆಯೇ ನಡೆದ ಈ ಘಟನೆಯಿಂದ ಸುತ್ತಮುತ್ತಲಿನ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಸದರ್ ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿಯಿಂದಾದ ನಷ್ಟದ ಅಂದಾಜು ಮಾಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
