Latestರಾಷ್ಟ್ರೀಯ-National

19 ವರ್ಷಗಳ ಬಳಿಕ ಕೊಲ್ಕತ್ತಾಗೆ ಮರಳಿದ ಲೇಖಕಿ ತಸ್ಲೀಮಾ ನಸ್ರೀನ್

ಕೊಲ್ಕತ್ತಾ: ಸುಮಾರು ಎರಡು ದಶಕಗಳ ಬಳಿಕ ಬಾಂಗ್ಲಾದೇಶ ಮೂಲದ ದೇಶಭ್ರಷ್ಟ ಲೇಖಕಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ತಸ್ಲೀಮಾ ನಸ್ರೀನ್ ಶುಕ್ರವಾರ ಕೊಲ್ಕತ್ತಾಗೆ ಆಗಮಿಸಿದ್ದಾರೆ. ನೆತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅವರು, “ಮತ್ತೆ ಕೊಲ್ಕತ್ತಾಗೆ ಬಂದಿರುವುದು ನನಗೆ ಅಪಾರ ಸಂತೋಷ ತಂದಿದೆ” ಎಂದು ಭಾವುಕರಾಗಿ ಪ್ರತಿಕ್ರಿಯಿಸಿದರು.

2007ರಲ್ಲಿ ತಮ್ಮ ವಿವಾದಾತ್ಮಕ ಆತ್ಮಕಥೆ ‘ದ್ವಿಖಂಡಿತೋ’ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ನೆಲೆ ತಸ್ಲೀಮಾ ನಸ್ರೀನ್ ಕೊಲ್ಕತ್ತಾವನ್ನು ತೊರೆಯಬೇಕಾಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ನಗರಕ್ಕೆ ಭೇಟಿ ನೀಡಿರುವುದು ವಿಶೇಷವಾಗಿದೆ.

2003ರಲ್ಲಿ ಅಂದಿನ ಸಿಪಿಎಂ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂಬ ಆರೋಪದ ಮೇರೆಗೆ ಅವರ ಪುಸ್ತಕವನ್ನು ನಿಷೇಧಿಸಿತ್ತು. ಪ್ರಸ್ತುತ 63 ವರ್ಷದ ತಸ್ಲೀಮಾ ನಸ್ರೀನ್ ದೆಹಲಿಯಲ್ಲಿ ದೀರ್ಘಾವಧಿಯ ನಿವಾಸ ಪರವಾನಗಿಯೊಂದಿಗೆ ವಾಸಿಸುತ್ತಿದ್ದಾರೆ.

ಶನಿವಾರ ರವೀಂದ್ರ ಸದನ್‌ನಲ್ಲಿ ನಡೆಯಲಿರುವ ಮೂಲಭೂತವಾದ ವಿರೋಧಿ ಕಾರ್ಯಕ್ರಮದಲ್ಲಿ ತಸ್ಲೀಮಾ ನಸ್ರೀನ್ ಭಾಗವಹಿಸಲಿದ್ದಾರೆ. ಈ ವೇಳೆ ತಮ್ಮ ಕವನಗಳನ್ನು ವಾಚಿಸುವುದರ ಜೊತೆಗೆ ಚರ್ಚೆಯಲ್ಲಿ ಪಾಲ್ಗೊಂಡು ನಾಗರಿಕ ಸನ್ಮಾನವನ್ನೂ ಸ್ವೀಕರಿಸಲಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಸ್ಲೀಮಾ ನಸ್ರೀನ್, “ನಾನು ಕೊಲ್ಕತ್ತಾವನ್ನು ಸ್ವಯಂಪ್ರೇರಿತವಾಗಿ ತೊರೆಯಲಿಲ್ಲ. ಅಂದಿನ ಪಶ್ಚಿಮ ಬಂಗಾಳ ಸರ್ಕಾರವೇ ನನ್ನನ್ನು ರಾಜ್ಯ ಬಿಡುವಂತೆ ಮಾಡಿತು. ಆದರೂ ಒಂದು ದಿನ ನಾನು ಮತ್ತೆ ಇಲ್ಲಿಗೆ ಮರಳುತ್ತೇನೆ ಎಂಬ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಲಿಲ್ಲ” ಎಂದು ಭಾವುಕರಾಗಿ ಹೇಳಿದರು.

Share with Friends
author avatar
News Desk