LatestTop Storiesಕೃಷಿ-Agricultureಜಿಲ್ಲಾ ಸುದ್ದಿಗಳು | District News

ಬಿಡದಿ ಕದನ.. ವಿಷದ ಬಾಟಲಿ ಹಿಡಿದು ಬೀದಿಗಿಳಿದ ಮಹಿಳೆಯರು

ಬೆಂಗಳೂರು ದಕ್ಷಿಣ, ಜು. 14- ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಮಹಿಳೆಯರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಂಡಿದೆ. ನಿನ್ನೆ ಟೌನ್‌ಶಿಪ್ ಯೋಜನೆ ಸಂಬಂಧ ಬಿಡದಿಯ ಮಂಡಲ ಹಳ್ಳಿಯಲ್ಲಿ ಭೂಸಮೀಕ್ಷೆಗಾಗಿ ಬಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಬೆನ್ನಲ್ಲೇ ಇಂದು ಮಹಿಳೆಯರು ವಿಷದ ಬಾಟಲಿ ಪ್ರದರ್ಶಿಸಿ ಉಗ್ರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ರೈತರ ವಿರುದ್ಧ ಎಫ್‌ಐಆರ್ ದಾಖಲು

ಹೋಬಳಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ (ಜಿಬಿಐಟಿ) ಕುರಿತಂತೆ ಬೈರಮಂಗಲದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ಕುರಿತಂತೆ ಪರ ಮತ್ತು ವಿರುದ್ಧ ನಡೆಯುತ್ತಿರುವ ಹೋರಾಟಗಳು ತಾರಕಕ್ಕೇರಿದೆ.

ಯೋಜನೆ ವಿರುದ್ಧ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರು ಜಂಟಿ ಪ್ರಮಾಣಿಕರಣ (ಜೆಎಂಸಿ) ವಿರೋಧಿಸಿ ಇಂದು ಮಹಿಳಾ ರೈತರು ಕೈಯಲ್ಲಿ ವಿಷದ ಬಾಟಲಿಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಇವರ ಕೂಗಳತೆ ದೂರದಲ್ಲಿ ಯೋಜನೆ ಪರವಾಗಿ ಧರಣಿ ನಡೆಸುತ್ತಿರುವ ರೈತರು ಜೆಎಂಸಿಗೆ ಆಗ್ರಹಿಸಿ ರಸ್ತೆತಡೆ ನಡೆಸಿದರು.

ಒಂದೆಡೆ ಟೌನ್‌ಶಿಪ್ ವಿರುದ್ಧದ ಘೋಷಣೆ ಮೊಳಗಿದರೆ ಮತ್ತೊಂದಡೆ ಟೌನ್‌ಶಿಪ್ ಪರ ಘೋಷಣೆ ಕೇಳಿ ಬಂದಿವೆ. ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬಿಡದಿ ಠಾಣೆ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ರಸ್ತೆತಡೆ ನಡೆಸದಂತೆ ರೈತರ ಮನವೊಲಿಸಲು ಮುಂದಾದರು. ಆದರೆ ಈ ಮನವೊಲಿಕೆಗೆ ಬಗ್ಗದ ಪ್ರತಿಭಟನಾನಿರತ ರೈತರು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷಾಧಿಕಾರಿ ಭೇಟಿ ನೀಡಬೇಕು. ತಕ್ಷಣ ಜಮೀನುಗಳಲ್ಲಿ ಜೆಎಂಸಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ನಿನ್ನೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ವಿರೋಧಿಸಿ, ಜಂಟಿ ಸಮೀಕ್ಷೆ ನಡೆಸಲು ಬಂದಿದ್ದ ಅಧಿಕಾರಿ ಜಿಬಿಡಿಎ ಅಧಿಕಾರಿಗಳ ಮೇಲೆ ರೈತ ಮಹಿಳೆಯರು ಪೊರಕೆಯಿಂದ ದಾಳಿ ನಡೆಸಿ, ಆಕ್ರೋಶ ಹೊರಹಾಕಿದರು. ಉದ್ರಿಕ್ತಗುಂಪು ಕಲ್ಲುತೂರಾಟ ನಡೆಸಿ, ಎರಡು ವಾಹನಗಳನ್ನು ಜಖಂಗೊಳಿಸಿತ್ತು. ಘಟನೆಯಲ್ಲಿ ಮೂವರು ಪೊಲೀಸರು ಸೇರಿದಂತೆ ರೈತನೋರ್ವ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಾ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Share with Friends
author avatar
Digital Desk