
ಕೆಪಿಎಸ್‌ಸಿ ಹಂಗಾಮಿ ಅಧ್ಯಕ್ಷರಾಗಿ ನೇಮಕವಾದ ಡಾ.ಬಿ.ಪ್ರಭುದೇವ್ ಪರಿಚಯ
ಬೆಂಗಳೂರು,ಜು.13: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಹಂಗಾಮಿ ಅಧ್ಯಕ್ಷರಾಗಿ ಡಾ. ಬಿ. ಪ್ರಭುದೇವ್ ನೇಮಕಗೊಂಡಿದ್ದಾರೆ. ಆಡಳಿತಾತ್ಮಕ ಅನುಭವ, ಪಾರದರ್ಶಕ ಕಾರ್ಯವೈಖರಿ ಹಾಗೂ ವೇಗದ ನೇಮಕಾತಿ ಪ್ರಕ್ರಿಯೆಗೆ ಹೆಸರುವಾಸಿಯಾಗಿರುವ ಅವರು, ಇದೀಗ ಕೆಪಿಎಸ್‌ಸಿಯ ನೇತೃತ್ವ ವಹಿಸಿರುವುದು ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದವರಾದ ಡಾ. ಬಿ. ಪ್ರಭುದೇವ್ ದಿ. ಬಸವೇಗೌಡ ಹಾಗೂ ದಿ. ಕೆಂಪಮ್ಮ ದಂಪತಿಯ ಪುತ್ರರು. ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಅವರು, ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಬಿ.ಎ. ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಇದನ್ನೂ ಓದಿ : ಕೆಪಿಎಸ್‌ಸಿ ಅಧ್ಯಕ್ಷರ ಅಮಾನತು,ಪ್ರಭುದೇವ್ ಹಂಗಾಮಿ ಅಧ್ಯಕ್ಷ
ವೃತ್ತಿಜೀವನವನ್ನು ಅಮೆರಿಕದ ಡೆಟ್ರಾಯಿಟ್‌ನ ಪ್ರತಿಷ್ಠಿತ ಫೋರ್ಡ್ ಕಂಪನಿಯಲ್ಲಿ ಆರಂಭಿಸಿದ ಅವರು, ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಉನ್ನತ ಹುದ್ದೆಗೂ ಏರಿದ್ದರು. ಬಳಿಕ ತಾಯ್ನಾಡಿನ ಸೇವೆಗಾಗಿ ಭಾರತಕ್ಕೆ ಮರಳಿದ ಅವರು, ವಾಣಿಜ್ಯ ತೆರಿಗೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಆಡಳಿತಾತ್ಮಕ ಸೇವೆಯನ್ನು ಪರಿಗಣಿಸಿ, 2021ರ ಏಪ್ರಿಲ್ 8ರಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಸರ್ಕಾರ ನೇಮಕ ಮಾಡಿತ್ತು.
ಪಾರದರ್ಶಕತೆ ಮತ್ತು ವೇಗಕ್ಕೆ ಆದ್ಯತೆ
ಕೆಪಿಎಸ್‌ಸಿಯಲ್ಲಿ ಪಾರದರ್ಶಕತೆ ಮತ್ತು ವೇಗದ ನೇಮಕಾತಿ ಪ್ರಕ್ರಿಯೆಗೆ ಉತ್ತೇಜನ ನೀಡಿದ ಅಧಿಕಾರಿಯಾಗಿ ಡಾ. ಪ್ರಭುದೇವ್ ಹೆಸರು ಪಡೆದಿದ್ದಾರೆ. ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಯಲ್ಲಿ ವಾಸ್ತವಿಕ ಹಾಗೂ ವಿಷಯಾಧಾರಿತ ಪ್ರಶ್ನೆಗಳ ಮೂಲಕ ಸಂದರ್ಶನ ನಡೆಸಿದ ಅವರ ಕಾರ್ಯವೈಖರಿ ಗಮನಸೆಳೆದಿತ್ತು.
ಯುಪಿಎಸ್‌ಸಿ ಮಾದರಿಯ ನೇಮಕಾತಿ ವ್ಯವಸ್ಥೆ ಜಾರಿಗೆ ತರುವುದರ ಜೊತೆಗೆ, ಅಧಿಸೂಚನೆ ಪ್ರಕಟವಾದ ಮೂರು ತಿಂಗಳೊಳಗೆ ನೇಮಕಾತಿ ಪಟ್ಟಿ ಪ್ರಕಟಿಸುವ ಗುರಿಯೊಂದಿಗೆ ಅವರು ಕಾರ್ಯನಿರ್ವಹಿಸಿದ್ದಾರೆ ಎಂಬ ಅಭಿಪ್ರಾಯವಿದೆ. ಇದರಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಲ್ಲಿ ವಿಶ್ವಾಸ ಮೂಡಿದೆ.
ಕೆಪಿಎಸ್‌ಸಿಯ ಮೇಲಿನ ವಿಶ್ವಾಸ ಮರುಸ್ಥಾಪನೆಯ ಸವಾಲು
ಕೆಪಿಎಸ್‌ಸಿಗೆ ಅಂಟಿರುವ ವಿವಾದಗಳು ಹಾಗೂ ಕಳಂಕವನ್ನು ದೂರ ಮಾಡಿ, ಆಯೋಗದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸುವ ದೊಡ್ಡ ಹೊಣೆಗಾರಿಕೆ ಇದೀಗ ಡಾ. ಬಿ. ಪ್ರಭುದೇವ್ ಅವರ ಮೇಲಿದೆ. ಹಾಲಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಪಾರದರ್ಶಕ ಹಾಗೂ ಸಮಯಬದ್ಧ ನೇಮಕಾತಿ ಪ್ರಕ್ರಿಯೆ ನಡೆಸುವ ಮೂಲಕ ಆಯೋಗಕ್ಕೆ ಹೊಸ ದಿಕ್ಕು ನೀಡುವ ನಿರೀಕ್ಷೆ ವ್ಯಕ್ತವಾಗಿದೆ.
