
ಬಹರೇನ್ ನಲ್ಲಿ ಸೈರನ್ ಸದ್ದು.ಗಗನಕ್ಕೇರಿದ ಕಚ್ಚಾ ತೈಲ ಬೆಲೆ
ಮನಾಮ (ಬಹರೇನ್),ಜು13 :ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಭಾರಿ ಏರಿಕೆ ಕಂಡಿದೆ.
ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷ ತೀವ್ರಗೊಂಡಿದ್ದು, ಬಹರೇನ್ ದೇಶಾದ್ಯಂತ ಸೈರನ್ ಸದ್ದು ಮೊಳಗಿದೆ.
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ವಾಣಿಜ್ಯ ನೌಕೆಯೊಂದರ ಮೇಲೆ ಗುಂಡು ಹಾರಿಸಿದೆ ಎಂದು ಆರೋಪಿಸಿ ಅಮೆರಿಕ ಸೇನೆ ಇರಾನ್ ಮೇಲೆ ಹೊಸ ದಾಳಿಗಳನ್ನು ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರತಿಯಾಗಿ ಇರಾನ್ ಬಹರೇನ್ನತ್ತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ್ದು, ನಾಗರಿಕರನ್ನು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಬಹರೇನ್ ಸರ್ಕಾರ ಸೂಚಿಸಿದೆ.
ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ (ಕೇಂದ್ರ ಕಚೇರಿ) ಇರುವ ಬಹರೇನ್ನಲ್ಲಿ ಮುಂಜಾನೆ ಸ್ಫೋಟದ ಸದ್ದುಗಳು ಕೇಳಿಬಂದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಸದ್ಯಕ್ಕೆ ಆಗಿರುವ ಹಾನಿಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಇರಾನ್ನ 8 ಪ್ರಮುಖ ತಾಣಗಳ ಮೇಲೆ ಅಮೆರಿಕ ಸೇನೆ ಮುಗಿಬಿದ್ದಿದೆ. ಈ ವಾರದಲ್ಲಿ ಅಮೆರಿಕ ನಡೆಸಿದ ಮೂರನೇ ಸುತ್ತಿನ ದಾಳಿ ಇದಾಗಿದೆ.ಇರಾನ್ನ ಖುಜೆಸ್ತಾನ್ ಪ್ರಾಂತ್ಯದ ಮಹಶಹರ್ನಲ್ಲಿರುವ ಕೃಷಿ ನೀರೆತ್ತುವ ಕೇಂದ್ರದ ಮೇಲೆ ಅಮೆರಿಕದ ಕ್ಷಿಪಣಿ ಅಪ್ಪಳಿಸಿದ್ದು, ಭದ್ರತಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.
ವಿಶ್ವದ ಅತ್ಯಂತ ಬ್ಯುಸಿ ತೈಲ ಸಾಗಣೆ ಮಾರ್ಗವಾದ ’ಹೊರ್ಮುಜ್ ಜಲಸಂಧಿ’ ಸದ್ಯ ಉಭಯ ದೇಶಗಳ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿದೆ. ಜಲಸಂಧಿ ಸಂಪೂರ್ಣ ಮುಕ್ತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸುತ್ತಿದ್ದರೆ, ಈ ಭಾಗದಲ್ಲಿ ಶಾಂತಿ ನೆಲೆಸುವವರೆಗೆ ಯಾವುದೇ ನೌಕೆಗಳ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಇರಾನ್ ಪಟ್ಟು ಹಿಡಿದಿದೆ.
ಕಳೆದ 24ಗಂಟೆಗಳಲ್ಲಿ ಅಮೆರಿಕ ಸೇನೆಯು ಇರಾನ್ನಾದ್ಯಂತ ಕನಿಷ್ಠ 140 ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಇರಾನ್ನ ಬಂದರ್ ಅಬ್ಬಾಸ್, ಸಿರಿಕ್ ಮತ್ತು ಕೇಶಮ್ ದ್ವೀಪಗಳಲ್ಲಿ ಪ್ರಬಲ ಸ್ಫೋಟಗಳು ಸಂಭವಿಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಬಹರೇನ್ ಮಾತ್ರವಲ್ಲದೆ ಕುವೈತ್, ಓಮನ್, ಕತಾರ್ ಮತ್ತು ಜೋರ್ಡಾನ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೂ ದಾಳಿ ನಡೆಸಿದೆ. ಕುವೈತ್ನ ತೈಲ ಘಟಕ ಮತ್ತು ಗಡಿ ಚೌಕಿಗಳಿಗೆ ಇರಾನ್ ಕ್ಷಿಪಣಿಗಳು ಅಪ್ಪಳಿಸಿವೆ ಎಂದು ವರದಿಯಾಗಿದೆ.
