
ಖಾಯಂ ನಿವಾಸ ಪ್ರಮಾಣಪತ್ರ ಕೊಡೋದ್ರಲ್ಲಿ ತಪ್ಪೇನಿದೆ?
ಬೆಂಗಳೂರು,ಜುಲೈ 11: ಚುನಾವಣಾ ಆಯೋಗದವರು ಎಸ್‌ಐಆರ್ ಪ್ರಕ್ರಿಯೆಯಲ್ಲಿ 13 ದಾಖಲೆಯನ್ನು ಕೇಳುತ್ತಾರೆ. ಅದರಲ್ಲಿ ನೀವು ಸ್ವಂತ ಮನೆಯಲ್ಲಿ ಇದ್ದೀರಾ? ಎಂಬ ಪ್ರಶ್ನೆಯೂ ಇದೆ. ಹಾಗಾಗಿ ನಾವು ಖಾಯಂ ನಿವಾಸ ಪ್ರಮಾಣಪತ್ರವನ್ನು ನೀಡಲು ಕ್ರಮ ವಹಿಸುವುದಾಗಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು,ಈವರೆಗೆ ಕೇಂದ್ರ ಸರ್ಕಾರ ಯಾವುದೇ ಪ್ರಮಾಣಪತ್ರಗಳನ್ನು ನೀಡಿಲ್ಲ. ಜಾತಿ ಪ್ರಮಾಣಪತ್ರವನ್ನು ಕೂಡ ರಾಜ್ಯ ಸರ್ಕಾರವೇ ನೀಡಿದೆ. ನಾವು ಆಧಾರ್ ಕಾರ್ಡ್ ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಖಾಯಂ ನಿವಾಸ ಪ್ರಮಾಣಪತ್ರ ನೀಡುತ್ತೇವೆ. ಅದರಲ್ಲಿ ತಪ್ಪೇನಿದೆ? ಎಲ್ಲದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಸುಮಾರು 50 ರಿಂದ 60 ಸಾವಿರ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರ ಇಲ್ಲದೆ ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಮಸ್ಯೆಯಾಗಿದೆ. ಈಗ ನಾವು ಖಾಯಂ ಪ್ರಮಾಣ ಪತ್ರದಲ್ಲಿ ಜಾತಿಯನ್ನು ಉಲ್ಲೇಖಿಸಿದರೆ ಪರೀಕ್ಷೆ ಬರೆಯುವ ಮಕ್ಕಳಿಗೆ ಅನುಕೂಲವಾಗುತ್ತದೆ. ಬಿಜೆಪಿಗರು ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಹೇಳಿದರು.
ಬಾಂಗ್ಲಾದೇಶದವರಿಗೂ ಖಾಯಂ ನಿವೇಶನ ಪತ್ರ ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದದ್ದು. ಬಾಂಗ್ಲಾದೇಶದ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ.ಇದು ರಾಷ್ಟ್ರೀಯ ಸಮಸ್ಯೆ. ರಾಜ್ಯ ಸರ್ಕಾರ ಬಾಂಗ್ಲಾದೇಶವರಿಗೆ ಪೌರತ್ವ ಕೊಡಲು ಆಗುತ್ತದೆಯೇ? ಒಂದು ವೇಳೆ ಬಾಂಗ್ಲಾದೇಶದವರು ನಮ್ಮ ದೇಶದವರನ್ನು ಮದುವೆಯಾದರೆ, ಆಗ ಅದಕ್ಕೊಂದು ನಿಬಂಧನೆಯಿದೆ. ಅದು ಬಿಟ್ಟು ಬಾಂಗ್ಲಾದೇಶದವರಿಗಾಗಲಿ ಅಥವಾ ಬೇರೆ ದೇಶದವರಿಗಾಗಲಿ ಪೌರತ್ವವನ್ನು ರಾಜ್ಯ ಸರ್ಕಾರ ಕೊಡಲು ಆಗುವುದಿಲ್ಲ ಎಂದು ಸ್ವಷ್ಟಪಡಿಸಿದರು.
