
ರಾಜ್ಯದ ಶೇ.50ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಬರಗಾಲ
ಗದಗ,ಜು.11 : ವರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದ ಸಂದರ್ಭದಲ್ಲಿ ರೈತರ ಕೈಹಿಡಿಯಬೇಕಾದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಮುಖ್ಯಮಂತ್ರಿಗಳು ಸಭೆ ಸಮಾರಂಭ ಬಿಟ್ಟು ಬರ ತಾಲೂಕುಗಳ ಕಡೆ ಗಮನಕೊಡಲಿ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದ ಬಹುತೇಕ ಬಯಲು ಸೀಮೆ ಪ್ರದೇಶಗಳು ಭೀಕರ ಬರಗಾಲಕ್ಕೆ ತುತ್ತಾಗಿವೆ.ಕರಾವಳಿ ಮತ್ತು ಮಲೆನಾಡಿನ ಕೆಲವು ತಾಲೂಕುಗಳಲ್ಲಿ ಮಾತ್ರ ಮಳೆಯಾಗಿದೆ. ಅದನ್ನು ನೆಪವಾಗಿಟ್ಟುಕೊಂಡು ಸಿಎಂ ಡಿಕೆಶಿ ನೋಡಿಕೊಂಡು ಬರ ಘೋಷಣೆ ಮಾಡುತ್ತೇವೆ ಎಂದು ಗಾಂಭೀರ್ಯವಿಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಶೇ.50ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಬರಗಾಲವಿದ್ದರೂ, ಸರ್ಕಾರದ ಬಳಿ ಯಾವುದೇ ಆಕ್ಷನ್ ಪ್ಲಾನ್ ಇಲ್ಲ. ಪ್ರಸ್ತುತ ರಾಜ್ಯದಲ್ಲಿ ಕೃಷಿ ಇಲಾಖೆಯೂ ಇಲ್ಲ, ಕೃಷಿ ಸಚಿವರೂ ಇಲ್ಲದಂತಾಗಿದೆ. ಮುಂಗಾರು ವಿಫಲವಾದಾಗ ಪರ್ಯಾಯ ಬೆಳೆ ಯೋಜನೆ ರೂಪಿಸಬೇಕಿತ್ತು.ಆದರೆ, ರೈತರಿಗೆ ಇಲಾಖೆಯಿಂದ ಯಾವುದೇ ಸಲಹೆ ಅಥವಾ ಮಾರ್ಗದರ್ಶನ ಸಿಗುತ್ತಿಲ್ಲ. ರೈತರು ಬೀಜ, ಗೊಬ್ಬರಕ್ಕೆ ಬಂಡವಾಳ ಹಾಕಿ ಈಗ ತೀವ್ರ ಹತಾಶರಾಗಿದ್ದಾರೆ ಎಂದರು.
ಇನ್ನು ರಾಜ್ಯ ಸರ್ಕಾರ ಹಾಗೂ ಸಿಎಂ ಡಿಕೆಶಿ ಕೇವಲ ಸಭೆ-ಸಮಾರಂಭಗಳನ್ನು ಮಾಡುವುದನ್ನು ಬಿಟ್ಟು, ತಕ್ಷಣವೇ ಬರ ಪೀಡಿತ ತಾಲೂಕುಗಳಿಗೆ ಮೊದಲ ಆದ್ಯತೆ ನೀಡಬೇಕು. ತಳಮಟ್ಟದ ವಾಸ್ತವಕ್ಕೆ ತಕ್ಕಂತೆ ಕಾರ್ಯಯೋಜನೆ ರೂಪಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ವಿತರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
