ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್ಗೆ ಬಾಂಬ್ ಬೆದರಿಕೆ
ಬೆಂಗಳೂರು : ನಗರದ ಹಲವು ಖಾಸಗಿ ಶಾಲೆಗಳಿಗೆ ಈ ಹಿಂದೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ನಗರದ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಕಿಡಿಗೇಡಿಗಳು ಇ-ಮೇಲ್ ಮಾಡಿದ್ದಾರೆ.
ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಪೊಲೀಸರು ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಅದೊಂದು ಹುಸಿ ಬಾಂಬ್ ಬೆದರಿಕೆ ಎಂದು ದೃಢವಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಮುಖ ರಾಜಕಾರಣಿಗಳು ಮತ್ತು ಕ್ರಿಕೆಟಿಗರಿಗೆ ಆತಿಥ್ಯ ನೀಡುವ ಹೋಟೆಲ್ ಇದಾಗಿದ್ದು, ಇಂದು ಮುಂಜಾನೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತಕ್ಷಣ ಸ್ಥಳೀಯ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ತಂಡಗಳನ್ನು ಹೋಟೆಲ್ಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳಿಂದ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವುದನ್ನು ಬೆಂಗಳೂರು ಉಪ ಪೊಲೀಸ್ ಆಯುಕ್ತ ಶೇಖರ್ ಎಚ್.ಟಿ ಖಚಿತಪಡಿಸಿದ್ದಾರೆ. ಹಾಗೂ ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಇನ್ನೂ ಇದೇ ವರ್ಷದ ಮೇ ತಿಂಗಳಿನಲ್ಲಿ, ಕರ್ನಾಟಕದ ಬೆಂಗಳೂರಿನ ಮೂರು ಹೋಟೆಲ್ಗಳಿಗೆ ಬಾಂಬ್ ಬೆದರಿಕೆಗಳು ಬಂದವು. ಅದರಲ್ಲಿ ಪಂಚತಾರಾ ಹೋಟೆಲ್ , ದಿ ಒಟೆರಾ ಕೂಡ ಸೇರಿದೆ. ಮುಂಜಾನೆ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವಾರ ಸೆಪ್ಟೆಂಬರ್ 18 ರಂದು ಅಶೋಕ್ ನಗರದಲ್ಲಿನ ಸೈನಿಕ ಶಾಲೆಗೂ ಕೂಡ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಶಾಲೆಯಲ್ಲಿ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಸಂದೇಶ ರವಾನಿಸಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ, ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ.
