
ಕೆಪಿಎಸ್ಸಿ ಅಕ್ರಮ ಪ್ರಕರಣ : ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅಮಾನತು
ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಸಿಐಡಿ ತನಿಖೆ ಪೂರ್ಣಗೊಳ್ಳುವವರೆಗೆ ಹಾಗೂ ಮುಂದಿನ ಆದೇಶ ಹೊರಡಿಸುವವರೆಗೆ ಅಮಾನತು ಜಾರಿಯಲ್ಲಿರಲಿದೆ.
ಈ ಕುರಿತು ಡಿಪಿಎಆರ್ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಅಮಾನತು ಅವಧಿಯಲ್ಲಿ ಸರ್ಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಕಚೇರಿ ವ್ಯಾಪ್ತಿಯನ್ನು ಬಿಟ್ಟು ತೆರಳದಂತೆ ಜ್ಞಾನೇಂದ್ರ ಕುಮಾರ್ ಅವರಿಗೆ ಸೂಚಿಸಲಾಗಿದೆ.
ಕೆಪಿಎಸ್ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 29ರಂದು ಜ್ಞಾನೇಂದ್ರ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಆಗಸ್ಟ್ 30ರಂದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಹೆಚ್ಚಿನ ತನಿಖೆಗಾಗಿ ಆಗಸ್ಟ್ 31ರಂದು ಸಿಐಡಿ ಕಸ್ಟಡಿಗೆ ಪಡೆದಿರುವುದಾಗಿ ಸಿಐಡಿ ಡಿಜಿ ಸರ್ಕಾರಕ್ಕೆ ವರದಿ ನೀಡಿದ್ದರು.
ಇದರ ನಡುವೆ, ಆಗಸ್ಟ್ 23ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು. ಪಿಎಂಎಲ್ಎ ಕಾಯ್ದೆಯಡಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಲಭ್ಯವಾದ ದಾಖಲೆಗಳ ಆಧಾರದಲ್ಲಿ ಕೆಪಿಎಸ್ಸಿಯಲ್ಲಿ ನೇಮಕಾತಿ ಅಕ್ರಮ ನಡೆದಿದೆ ಎಂಬ ಮಾಹಿತಿ ದೊರೆತಿರುವುದಾಗಿ ಇ.ಡಿ ತಿಳಿಸಿತ್ತು.
ದಾಖಲೆಗಳ ಪ್ರಕಾರ ಜ್ಞಾನೇಂದ್ರ ಕುಮಾರ್ ಅವರು ಕೆಪಿಎಸ್ಸಿಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ, ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆ ಕುರಿತು ಬಂದಿರುವ ಆರೋಪಗಳನ್ನು ಗಮನಿಸಿದೆ. ಅಲ್ಲದೆ, ಜ್ಞಾನೇಂದ್ರ ಕುಮಾರ್ ಅವರು 48 ಗಂಟೆಗಳಿಗಿಂತ ಹೆಚ್ಚು ಕಾಲ ಅಧಿಕೃತ ಬಂಧನದಲ್ಲಿರುವ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಸರ್ವಿಸಸ್ (ಕಂಡಕ್ಟ್) ರೂಲ್ಸ್ ಉಲ್ಲಂಘನೆಯಾಗಿರುವ ಸಾಧ್ಯತೆಯನ್ನೂ ಪರಿಗಣಿಸಿದೆ.
ಸಿಐಡಿ ತನಿಖೆ ಪೂರ್ಣಗೊಳ್ಳುವವರೆಗೆ ಜ್ಞಾನೇಂದ್ರ ಕುಮಾರ್ ಅವರನ್ನು ಅಮಾನತುಗೊಳಿಸುವುದು ಅಗತ್ಯ ಎಂದು ಸರ್ಕಾರ ನಿರ್ಧರಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯಪಾಲರ ಹೆಸರಿನಲ್ಲಿ ಡಿಪಿಎಆರ್ ಅಧೀನ ಕಾರ್ಯದರ್ಶಿ ಈ ಅಮಾನತು ಆದೇಶ ಹೊರಡಿಸಿದ್ದಾರೆ.
