
ಸಿನಿಮಾ ನಿರ್ಮಾಪಕ, ನಿರ್ದೇಶಕ, ರಾಜಕಾರಣಿಗಳ ಹೆಸರಲ್ಲಿ ಮಹಿಳೆಯರಿಗೆ ವಂಚಿಸುತ್ತಿದ್ದ ಇಬ್ಬರ ಬಂಧನ
ಬೆಂಗಳೂರು: ಸಿನಿಮಾ ನಿರ್ಮಾಪಕರು, ನಿರ್ದೇಶಕರು ಹಾಗೂ ರಾಜಕಾರಣಿಗಳ ಹೆಸರನ್ನು ಬಳಸಿಕೊಂಡು ವಿವಾಹಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಂತೋಷ್ (34) ಹಾಗೂ ಪುನೀತ್ ಕುಮಾರ್ (25) ಎಂದು ಗುರುತಿಸಲಾಗಿದೆ. ಆರೋಪಿಗಳು ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಎಡಿಟ್ ಮಾಡಿದ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಮಹಿಳೆಯರ ಪರಿಚಯ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ವಿಶೇಷವಾಗಿ ವಿವಾಹಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡು, ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸುತ್ತಿದ್ದರು. ತಮಗೆ ಸಿನಿಮಾ ನಿರ್ದೇಶಕರು ಹಾಗೂ ರಾಜಕಾರಣಿಗಳ ಪರಿಚಯವಿದೆ ಎಂದು ಹೇಳಿ, ಖ್ಯಾತ ರಾಜಕಾರಣಿಗಳೊಂದಿಗೆ ಇರುವ ಫೋಟೋಗಳನ್ನು ತೋರಿಸಿ ಮಹಿಳೆಯರನ್ನು ನಂಬಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು ಹಾಗೂ ದಾವಣಗೆರೆಯ ಪ್ರಮುಖ ರಾಜಕಾರಣಿಗಳ ಫೋಟೋಗಳನ್ನು ತೋರಿಸಿ ಮಾತುಕತೆ ನಡೆಸುತ್ತಿದ್ದ ಆರೋಪಿಗಳು, ಬಳಿಕ ಮಹಿಳೆಯರನ್ನು ಲಾಡ್ಜ್‌ಗಳಿಗೆ ಕರೆಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮದುವೆಯಾಗಿಲ್ಲ ಎಂಬಂತೆ ಬಿಂಬಿಸಲು ಮಹಿಳೆಯರಿಗೆ ಆಭರಣಗಳನ್ನು ತೆಗೆದು ಇಡುವಂತೆ ಹೇಳುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ಖ್ಯಾತ ನಿರ್ಮಾಪಕ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಹೆಸರು ಹೇಳಿಕೊಂಡು ಯುವತಿಯರನ್ನು ವಂಚಿಸುತ್ತಿದ್ದ ಆರೋಪಿಗಳಿಂದ ಸುಮಾರು 19 ಲಕ್ಷ ರೂಪಾಯಿ ಮೌಲ್ಯದ 130 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
