
ಕೋಲಾರಮ್ಮ ಕೆರೆಯಲ್ಲಿ ಲಕ್ಷಾಂತರ ಮೀನುಗಳ ಸಾವು ; ನೀರಿಗೆ ವಿಷ ಹಾಕಿರುವ ಶಂಕೆ
ಕೋಲಾರ: ನಗರದ ಕೋಲಾರಮ್ಮ ಕೆರೆಯಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಬೇರೆ ಜಾತಿಯ ಮೀನುಗಳನ್ನು ಸಾಕಾಣಿಕೆ ಮಾಡುವ ಉದ್ದೇಶದಿಂದ ಕೆರೆಯಲ್ಲಿದ್ದ ಮೀನುಗಳಿಗೆ ವಿಷ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೀನು ಸಾಕಾಣಿಕೆಯ ಗುತ್ತಿಗೆ ಪಡೆದಿದ್ದ ವ್ಯಕ್ತಿಯೇ ಕೆರೆ ನೀರಿಗೆ ವಿಷ ಹಾಕಿರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ಇದರಿಂದ ಕೆರೆಯಲ್ಲಿರುವ ಇತರ ಜಲಚರಗಳಿಗೂ ಅಪಾಯ ಎದುರಾಗಿದ್ದು, ಕೆರೆ ನೀರು ಕುಡಿಯುವ ಪ್ರಾಣಿ–ಪಕ್ಷಿಗಳ ಜೀವಕ್ಕೂ ಹಾನಿಯಾಗುವ ಆತಂಕ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೀನು ಸಾಕಾಣಿಕಾ ಗುತ್ತಿಗೆದಾರನ ವಿರುದ್ಧ ಸಣ್ಣ ನೀರಾವರಿ ಇಲಾಖೆಗೆ ದೂರು ನೀಡಲಾಗಿದೆ. ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ವಿಕೆ. ರಾಜೇಶ್ ಒತ್ತಾಯಿಸಿದ್ದಾರೆ.
ಕೆರೆಯ ನೀರಿಗೆ ವಿಷ ಹಾಕಿರುವ ಆರೋಪದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಜಲಚರ ಹಾಗೂ ಪ್ರಾಣಿ–ಪಕ್ಷಿಗಳ ಜೀವಕ್ಕೆ ಯಾವುದೇ ಅಪಾಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
