BlogEntertainmentLatestTop Stories

ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ತೂಗುದೀಪಗೆ ಕರ್ನಾಟಕ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ದರ್ಶನ್​ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಕರ್ನಾಟಕ ಹೈಕೋರ್ಟ್ ಆರು ವಾರಗಳ ಅವಧಿ ಅಂದರೆ 45 ದಿನಗಳ ಕಾಲದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆ ಮೂಲಕ ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿ ದಿನ ದೂಡುತ್ತಿದ್ದ ನಟ ದರ್ಶನ್​ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆಗಿರುವ ನಟ ದರ್ಶನ್, ಮೈಸೂರಿನಲ್ಲಿ ಶೂಟಿಂಗ್‌ ತೆರಳಿದ್ದ ದರ್ಶನ್‌ ಅವರನ್ನು ಪೊಲೀಸರು ಜೂನ್ 11 ರಂದು ಬೆಂಗಳೂರಿಗೆ ಕರೆ ತಂದು ಬಂಧಿಸಿದ್ದರು. 11 ದಿನಗಳ ಕಾಲ ಪೊಲೀಸರ ಕಸ್ಟಡಿಯಲ್ಲಿ ವಿಚಾರಣೆ ಎದುರಿಸಿದ್ದ ದರ್ಶನ್ ಬಳಿಕ ವಿಚಾರಣಾ ಕೈದಿಯಾಗಿ ಜೈಲು ಸೇರಿದ್ದರು. ಜೂನ್ 22ಕ್ಕೆ ನ್ಯಾಯಾಂಗ ಬಂಧನ ಜಾರಿಯಾಗಿತ್ತು.

ಪರಪ್ಪನ ಅಗ್ರಹಾರ ಜೈಲಲ್ಲಿ ಪಾರ್ಟಿ ಮಾಡಿದ ಫೋಟೋ ವೈರಲ್‌ ಆದ ನಂತರ ಕೋರ್ಟ್‌ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿಸಿತ್ತು. 69 ದಿನ ಪರಪ್ಪನ ಅಗ್ರಹಾರದಲ್ಲಿ ಕಳೆದ ದರ್ಶನ್ ಆಗಸ್ಟ್ 29 ಕ್ಕೆ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. 5 ತಿಂಗಳಿನಿಂದ ಕಂಬಿ ಹಿಂದೆ ಕಾಲ ಕಳೆದಿದ್ದ ದರ್ಶನ್‌ಗೆ ಈಗ ಬಿಡುಗಡೆಯಾಗುವ ಭಾಗ್ಯ ಸಿಕ್ಕಿದೆ.

ಜಾಮೀನಿಗೆ ವಿಧಿಸಿದ ಶರತ್ತುಗಳೇನು..?
ಮಧ್ಯಂತರ ಜಾಮೀನಿಗೆ ಹೈಕೋರ್ಟ್ ಸಾಕಷ್ಟು ಷರತ್ತುಗಳನ್ನು ವಿಧಿಸಿದೆ. ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು, ‘ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು’ ಎಂದು ಉಲ್ಲೇಖಿಸಿ ಇದೀಗ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.

ಆದರೆ ಆರು ವಾರಗಳ ಮಧ್ಯಂತರ ಜಾಮೀನು ಇದಾಗಿದ್ದು, ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ನೀಡಲಾಗಿದೆ. ಜಾಮೀನು ಪಡೆದ ಬಳಿಕ ಒಂದು ವಾರದಲ್ಲಿ ನಟ ದರ್ಶನ್ ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ವಿವರವನ್ನು ಕೋರ್ಟ್ ಗೆ ನೀಡಬೇಕು ಎಂದು ಹೇಳಿದೆ.

ಅಲ್ಲದೆ ದರ್ಶನ್ ಪಾಸ್ಪೋರ್ಟ್ ಅನ್ನು ಕೋರ್ಟ್ ಸುಪರ್ಧಿಗೆ ನೀಡಬೇಕು ಎಂದು ಹೇಳಿದ್ದು, ಪ್ರತೀವಾರವೂ ಚಿಕಿತ್ಸಾ ವಿವರ ನೀಡಬೇಕು. ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಹೇಳಿದೆ.

Share with Friends
author avatar
News Desk