
ಮನೆ ಕುಸಿದು ಇಬ್ಬರು ಕಾರ್ಮಿಕರು ಸಾವು
ಚಿಕ್ಕೋಡಿ (ಬೆಳಗಾವಿ)ಜು.12 : ಮನೆ ಕುಸಿದು ಇಬ್ಬರು ಸಾವು ಕಂಡ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ನಡೆದಿದೆ.

ಕೊಟ್ಟಲಗಿ ಗ್ರಾಮದ ನಿವಾಸಿಗಳಾದ ಮಾದೇವ್ ಕೃಷ್ಣಪ್ಪ ಬಡಿಗೇರ್ (48), ಸೈಯದ್ ಕೆಂಪವಾಡಿ (32) ಮೃತ ಕಾರ್ಮಿಕರಾಗಿದ್ದಾರೆ. ಇವರಿಬ್ಬರು ಲಕ್ಷ್ಮೀಬಾಯಿ ನಂದಗೊಂಡ ಎಂಬುವರ ಮನೆ ರಿಪೇರಿ ಮಾಡುವಾಗ ಈ ದುರಂತ ಸಂಭವಿಸಿದೆ.

ಮಳೆ ಬಂದ ಹಿನ್ನೆಲೆಯಲ್ಲಿ ಲಕ್ಷ್ಮೀಬಾಯಿ ನಂದಗೊಂಡ ಮನೆ ಸೋರುತ್ತಿತ್ತು. ಇದರ ಹಿನ್ನೆಲೆಯಲ್ಲಿ ಇದರ ರಿಪೇರಿ ಕಾರ್ಯ ನಡೆಸುತ್ತಿದ್ದ ಮಾದೇವ್ ಕೃಷ್ಣಪ್ಪ ಹಾಗೂ ಸೈಯದ್ ಮೇಲೆ ಏಕಾಏಕಿ ಮನೆ ಕುಸಿದು ಬಿದ್ದಿದೆ. ಪರಿಣಾಮ ಇಬ್ಬರು ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿದ್ದಾರೆ.ತಕ್ಷಣ ಸ್ಥಳೀಯರು ಇವರಿಬ್ಬರನ್ನು ರಕ್ಷಿಸಿ ಪಕ್ಕದ ಮಹಾರಾಷ್ಟ್ರದ ಜತ್ತ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
