
ಶೃತಿ ಅಭಿನಯದ 175ನೇ ಚಿತ್ರ ‘ಮದರ್’ಗೆ ಮಂಡ್ಯದ ಮಹಿಳೆಯ ಹೋರಾಟದ ಕಥೆ
ಬೆಂಗಳೂರು, ಜೂನ್ 11: ಅಭಿನಯ ಸರಸ್ವತಿ ಶೃತಿ ಅವರ ಅಭಿನಯದ 175ನೇ ಸಿನಿಮಾ ‘ಮದರ್’ಗೆ ಇಂದು ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮುಹೂರ್ತ ನೆರವೇರಿತು. ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಟ ವಿನೋದ್ ಪ್ರಭಾಕರ್ ಹಾಗೂ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದು, ಚಿತ್ರಕ್ಕೆ ಶುಭಕೋರಿದರು.
ಚಿತ್ರದ ನಿರ್ದೇಶಕ ರಾಕೇಶ್ ಸೋಮಣ್ಣ ಮಾತನಾಡಿ, ‘ಮದರ್’ ಒಂದು ಶಕ್ತಿಯುತ ಕಥಾಹಂದರ ಹೊಂದಿರುವ ಸಿನಿಮಾ ಎಂದು ತಿಳಿಸಿದರು. ಮಂಡ್ಯದ ಅನಕ್ಷರಸ್ಥ ಮಹಿಳೆಯೊಬ್ಬಳು ತನ್ನ ಸಂಸಾರವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟವೇ ಚಿತ್ರದ ಮುಖ್ಯ ಕಥಾವಸ್ತುವಾಗಿದೆ. ಈ ಚಿತ್ರದಲ್ಲಿ ಶೃತಿ ಅವರನ್ನು ಪ್ರೇಕ್ಷಕರು ಇದುವರೆಗೆ ಕಾಣದ ವಿಭಿನ್ನ ಅವತಾರದಲ್ಲಿ ಕಾಣಲಿದ್ದಾರೆ. ರಗಡ್ ಲುಕ್‌ನಲ್ಲಿ ಅವರು ಅಭಿನಯಿಸುತ್ತಿದ್ದು, ಮಂಡ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ಹೇಳಿದರು.
ನಟ ವಿನೋದ್ ಪ್ರಭಾಕರ್ ಮಾತನಾಡಿ, ಶೃತಿ ಅವರನ್ನು ತಾವು ಸದಾ “ಅಮ್ಮ” ಎಂದೇ ಕರೆಯುವುದಾಗಿ ತಿಳಿಸಿದರು. 175 ಸಿನಿಮಾಗಳ ಪಯಣ ಸಾಧಿಸುವುದು ಸುಲಭದ ಮಾತಲ್ಲ. ಕನ್ನಡ ಚಿತ್ರರಂಗದಲ್ಲಿ ಶೃತಿ ಅವರಿಗೆ ಯಾವುದೇ ಪರ್ಯಾಯ ಇಲ್ಲ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ನಟಿ ಶೃತಿ ಮಾತನಾಡಿ, ತಮ್ಮ ವೃತ್ತಿಜೀವನದ ಪ್ರತಿಯೊಂದು ಸಿನಿಮಾ ವಿಶೇಷವಾದರೂ, 175ನೇ ಸಿನಿಮಾ ಎನ್ನುವ ಕಾರಣಕ್ಕೆ ‘ಮದರ್’ ಮತ್ತಷ್ಟು ವಿಶೇಷವಾಗಿದೆ ಎಂದರು. ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ಡಾ. ರಾಜ್‌ಕುಮಾರ್ ಹಾಗೂ ತಮ್ಮ ಸಿನಿ ಪಯಣದಲ್ಲಿ ಬೆಂಬಲಿಸಿದ ದ್ವಾರಕೀಶ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಚಿತ್ರದ ಕಥೆ ಕೇಳಿದ ಕ್ಷಣದಿಂದಲೇ ಆಸಕ್ತಿ ಮೂಡಿದ್ದು, ಹೊಸತನದ ಪ್ರಯತ್ನ ಮಾಡುವ ಉತ್ಸಾಹ ಚಿತ್ರತಂಡದಲ್ಲಿದೆ ಎಂದು ಹೇಳಿದರು. ಈ ಸಿನಿಮಾಕ್ಕಾಗಿ ಮೊದಲ ಬಾರಿಗೆ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿರುವುದಾಗಿ ತಿಳಿಸಿದ ಅವರು, ಪ್ರೇಕ್ಷಕರ ಬೆಂಬಲವನ್ನು ಕೋರಿದರು.
ಚಿತ್ರದಲ್ಲಿ ಶೃತಿ ಅವರ ಮಗನ ಪಾತ್ರದಲ್ಲಿ ನಟಿಸಿರುವ ಚಿರಂಜೀವಿ ಮಾತನಾಡಿ, ತಾವು ಕೂಡ ರಫ್ ಅಂಡ್ ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ತಮ್ಮ ಪಾತ್ರವನ್ನು ವಿಭಿನ್ನವಾಗಿ ರೂಪಿಸಲಾಗಿದೆ ಎಂದು ಹೇಳಿದ ಅವರು, ಶೀಘ್ರದಲ್ಲೇ ಚಿತ್ರದ ವಿಶೇಷ ಗ್ಲಿಂಪ್ಸ್ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ನಿರ್ಮಾಪಕ ಕೆ. ಸತೀಶ್ ಚಂದ್ರ ಮಾತನಾಡಿ, ಮೈಸೂರಿನಲ್ಲಿ ತಮ್ಮ ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾ ಆರಂಭಿಸಿರುವ ಖುಷಿಯ ಜೊತೆಗೆ, ಇದೀಗ ‘ಮದರ್’ ಚಿತ್ರದ ಮೂಲಕ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದ್ದೇವೆ ಎಂದರು. ಚಿತ್ರ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಆರತಿ ಹಾಗೂ ಸತೀಶ್ ಚಂದ್ರ ನಿರ್ಮಾಣದಲ್ಲಿ ಶಾಂತ್ವು ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ‘ಮದರ್’ ಚಿತ್ರದಲ್ಲಿ ಶೃತಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ, ಪ್ರಸನ್ನ ಶೆಟ್ಟಿ, ಅರ್ಚನಾ ಹೆಗ್ಡೆ, ಅಭಯ್ ಪುನೀತ್, ಗೀತಾಂಜಲಿ, ಹಿಮಶ್ರೀ ಸೇರಿದಂತೆ ಹಲವರು ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅಂಜನ್ ಸಂಗೀತ, ಯು. ಅಶ್ವಿನ್ ಛಾಯಾಗ್ರಹಣ, ವಸಂತ್ ಸಂಕಲನ ಹಾಗೂ ನಾಗಾರ್ಜುನ ಶರ್ಮಾ ಸಾಹಿತ್ಯ ಒದಗಿಸುತ್ತಿದ್ದಾರೆ.
