
ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ ತೆರಿಗೆ ವಿನಾಯಿತಿ, ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ನವದೆಹಲಿ, ಜೂ.11: ದೇಶದಲ್ಲಿ ಹಸಿರು ಇಂಧನ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸೇರಿದಂತೆ ವಿವಿಧ ತೆರಿಗೆಗಳಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಈ ಕುರಿತು ಹೊಸ ಅಧಿಸೂಚನೆ ಹೊರಡಿಸಿದ್ದು, ಈವರೆಗೆ E20ವರೆಗೆ ಮಾತ್ರ ಲಭ್ಯವಿದ್ದ ತೆರಿಗೆ ವಿನಾಯಿತಿಯನ್ನು ಈಗ E22ರಿಂದ E30ವರೆಗಿನ ಇಂಧನ ಮಿಶ್ರಣಗಳಿಗೂ ವಿಸ್ತರಿಸಲಾಗಿದೆ.
ಹೊಸ ನಿಯಮದ ಪ್ರಕಾರ E22 (22% ಎಥೆನಾಲ್), E25 (25%), E27 (27%) ಹಾಗೂ E30 (30%) ಮಿಶ್ರಣದ ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕ, ವಿಶೇಷ ಹೆಚ್ಚುವರಿ ಅಬಕಾರಿ ಸುಂಕ, ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಹಾಗೂ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಸಂಪೂರ್ಣ ರದ್ದುಗೊಳಿಸಲಾಗಿದೆ.
ಭಾರತವು ಎಥೆನಾಲ್ ಮಿಶ್ರಣ ಕಾರ್ಯಕ್ರಮದಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದು, 2030ರೊಳಗೆ ಸಾಧಿಸಬೇಕಿದ್ದ E20 ಗುರಿಯನ್ನು 2025-26ರಲ್ಲೇ ತಲುಪುವ ದಿಕ್ಕಿನಲ್ಲಿ ಸಾಗುತ್ತಿದೆ. 2022-23ರಲ್ಲಿ ಶೇ.12.06ರಷ್ಟಿದ್ದ ಎಥೆನಾಲ್ ಮಿಶ್ರಣ ಪ್ರಮಾಣವು 2023-24ರಲ್ಲಿ ಶೇ.14.60ಕ್ಕೆ ಏರಿಕೆಯಾಗಿದೆ. 2024-25ರ ಫೆಬ್ರವರಿವರೆಗೆ ಇದು ಶೇ.17.98ಕ್ಕೆ ತಲುಪಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ, ಭಾರತ ತನ್ನ ಕಚ್ಚಾ ತೈಲ ಅಗತ್ಯದ ಸುಮಾರು ಶೇ.87ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಎಥೆನಾಲ್ ಬಳಕೆ ಹೆಚ್ಚುವುದರಿಂದ ತೈಲ ಆಮದು ವೆಚ್ಚ ಕಡಿಮೆಯಾಗಲಿದ್ದು, ವಿದೇಶಿ ವಿನಿಮಯ ಉಳಿತಾಯವಾಗಲಿದೆ.
ಇದರೊಂದಿಗೆ ಎಥೆನಾಲ್ ಅನ್ನು ಹಸಿರು ಇಂಧನವೆಂದು ಪರಿಗಣಿಸಲಾಗಿರುವುದರಿಂದ ವಾಯು ಮಾಲಿನ್ಯ ಕಡಿಮೆಯಾಗುವ ನಿರೀಕ್ಷೆಯಿದೆ. ಜೊತೆಗೆ ಕಬ್ಬು ಹಾಗೂ ಧಾನ್ಯಗಳಿಂದ ಎಥೆನಾಲ್ ಉತ್ಪಾದನೆ ಹೆಚ್ಚುವುದರಿಂದ ರೈತರು, ಗ್ರಾಮೀಣ ಯುವಕರು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಿಗೆ ನೇರ ಆರ್ಥಿಕ ಲಾಭ ದೊರೆಯಲಿದೆ.
ಎಂಜಿನ್ ಹೊಂದಾಣಿಕೆ ಕುರಿತ ಕೆಲವು ಆಕ್ಷೇಪಣೆಗಳು ವ್ಯಕ್ತವಾಗಿದ್ದರೂ, ಸರ್ಕಾರದ ಎಥೆನಾಲ್ ಮಿಶ್ರಣ ನೀತಿಗೆ ನ್ಯಾಯಾಂಗವೂ ಬೆಂಬಲ ನೀಡಿದೆ. ಇದೀಗ E30ವರೆಗಿನ ಇಂಧನಗಳಿಗೆ ತೆರಿಗೆ ವಿನಾಯಿತಿ ಘೋಷಿಸಿರುವುದು ದೇಶವನ್ನು ಇಂಧನ ಸ್ವಾವಲಂಬನೆಯತ್ತ ಮತ್ತಷ್ಟು ಮುನ್ನಡೆಸುವ ಮಹತ್ವದ ಹೆಜ್ಜೆಯಾಗಿದೆ.
