Latestಜಿಲ್ಲಾ ಸುದ್ದಿಗಳು | District Newsರಾಜ್ಯ-Karnataka

ಉಡುಪಿ : ತೆಂಗಿನಕಾಯಿ ಬಿದ್ದು 8 ತಿಂಗಳ ಕಂದಮ್ಮ ಸಾವು

ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದಲ್ಲಿ ಮನಕಲಕುವ ಘಟನೆ ಸಂಭವಿಸಿದ್ದು, ತಾಯಿಯ ಮಡಿಲಲ್ಲಿದ್ದ 8 ತಿಂಗಳ ಕಂದಮ್ಮನ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮೃತಪಟ್ಟಿದ್ದಾನೆ.

ಕಳೆದ ಮಂಗಳವಾರ ಈ ದುರ್ಘಟನೆ ನಡೆದಿದೆ. ತೆಂಗಿನ ತೋಟದಲ್ಲಿದ್ದ ಮರದಿಂದ ಅಚಾನಕ್ ಆಗಿ ಕಳಚಿಬಿದ್ದ ತೆಂಗಿನಕಾಯಿ ನೇರವಾಗಿ ಮಗುವಿನ ತಲೆಗೆ ಬಿದ್ದ ಪರಿಣಾಮ ಮಗು ಗಂಭೀರವಾಗಿ ಗಾಯಗೊಂಡಿತ್ತು. ಕೂಡಲೇ ಸ್ಥಳೀಯರ ಸಹಾಯದಿಂದ ಮಗುವನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತು.

ತಲೆಗೆ ತೀವ್ರ ಪೆಟ್ಟಾಗಿದ್ದ ಕಾರಣ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದರೂ, ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಈ ಘಟನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ.

ಮೃತ ಮಗು ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ ಎರಡನೇ ಪುತ್ರನಾಗಿದ್ದಾನೆ. ಪ್ರಶಾಂತ್ ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು, ಸುಚಿತ್ರಾ ಗೃಹಿಣಿಯಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬ್ರಹ್ಮಾವರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರಾವಳಿ ಭಾಗದಲ್ಲಿ ತೆಂಗಿನ ಮರಗಳು ಸಾಮಾನ್ಯವಾಗಿದ್ದರೂ, ಇಂತಹ ಆಕಸ್ಮಿಕ ಘಟನೆಗಳು ಎಷ್ಟು ಅಪಾಯಕಾರಿಯಾಗಿರಬಹುದು ಎಂಬುದಕ್ಕೆ ಈ ದುರ್ಘಟನೆ ಕಣ್ಣೀರಿನ ಸಾಕ್ಷಿಯಾಗಿದೆ. ಪುಟಾಣಿ ಕಂದಮ್ಮನ ಅಕಾಲಿಕ ನಿಧನಕ್ಕೆ ಚಾಂತಾರು ಗ್ರಾಮ ಸೇರಿದಂತೆ ಇಡೀ ಪ್ರದೇಶದ ಜನರು ಕಂಬನಿ ಮಿಡಿದಿದ್ದಾರೆ.

Share with Friends
author avatar
News Desk