
ಎರಡನೇ ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಭಕ್ತಸಾಗರ
ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರದ ಪ್ರಯುಕ್ತ ನಾಡದೇವತೆ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ್ದು, ತಾಯಿಯ ದರ್ಶನಕ್ಕಾಗಿ ಭಕ್ತಸಾಗರವೇ ಹರಿದುಬಂದಿದೆ.ಎರಡನೇ ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡೇಶ್ವರಿ ತಾಯಿಗೆ ಮನಮೋಹಕ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಿಗೆ ಕುಂಕುಮಾರ್ಚನೆ, ರುದ್ರಾಭಿಷೇಕ ಹಾಗೂ ಸಪ್ತಶತಿ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ನೆರವೇರಿದವು.
ಬೆಳಗಿನ ಜಾವದಿಂದಲೇ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಸುದೀರ್ಘ ಸರದಿ ಸಾಲಿನಲ್ಲಿ ನಿಂತು ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕೆಎಸ್ಆರ್ಟಿಸಿ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೊತೆಗೆ, ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆಯು ಬಿಗಿ ಭದ್ರತೆ ಹಾಗೂ ಖಾಕಿ ಕಟ್ಟೆಚ್ಚರ ವಹಿಸಿದೆ.
