ರಾಜ್ಯ-Karnatakaರಾಷ್ಟ್ರೀಯ-National

ನೀಟ್ ಪೇಪರ್ ಲೀಕ್ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ..!

​ನವದೆಹಲಿ: ದೇಶಾದ್ಯಂತ ತೀವ್ರ ಕೋಲಾಹಲ ಸೃಷ್ಟಿಸಿರುವ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೌನ ಮುರಿದಿದ್ದು, ತಡರಾತ್ರಿ ಬಿಡುಗಡೆ ಮಾಡಿದ ವಿಶೇಷ ಸೆಲ್ಫಿ ವಿಡಿಯೋ ಸಂದೇಶದ ಮೂಲಕ ದೇಶದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಭರವಸೆ ನೀಡಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಎಂಬುದು ಸಣ್ಣ ವಿಷಯವಲ್ಲ. ಇದು ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಅತ್ಯಂತ ನೋವಿನ ಸಂಗತಿ.
ನೀಟ್ ಅಕ್ರಮ ಬಯಲಿಗೆ ಬಂದ ತಕ್ಷಣವೇ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಅಪರಾಧಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಅವರು ಪ್ರಸ್ತುತ ಜೈಲಿನಲ್ಲಿದ್ದಾರೆ.

ಪೇಪರ್ ಲೀಕ್ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಮತ್ತು ಪ್ರಕರಣಗಳ ಶೀಘ್ರ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲು ಹಾಗೂ ನೂತನ ಕಠಿಣ ಕಾನೂನು ತರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯ ಮತ್ತು ಶೈಕ್ಷಣಿಕ ವರ್ಷ ವ್ಯರ್ಥವಾಗಬಾರದು ಎಂಬುದೇ ಸರ್ಕಾರದ ಮೊದಲ ಆದ್ಯತೆಯಾಗಿತ್ತು. ಹೀಗಾಗಿ ಕನಿಷ್ಠ ಸಮಯದಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ.

​ವಿದ್ಯಾರ್ಥಿಗಳು ಮತ್ತು ಯುವಜನತೆಯ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಇನ್ನಷ್ಟು ಕಠಿಣ ಕಾನೂನು ತರಲಾಗುವುದು ಎಂದು ಪ್ರಧಾನಿ ಮೋದಿ ವಿಡಿಯೋ ಮೂಲಕ ಭರವಸೆ ನೀಡಿದ್ದಾರೆ.

Share with Friends
author avatar
Digital Desk