ಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಸ್ಟಿಂಗ್ ಆಪರೇಷನ್ ಪಾರ್ಟ್‌-2 ಬಗ್ಗೆ ಮಾಹಿತಿ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು.ಅ.೧೨- ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯ ಮುಂದುವರಿದ ಭಾಗದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, “ನಾವು ಈ ಹಿಂದೆ ಏನು ಹೇಳಿದ್ದೇವೆಯೋ ಅಷ್ಟಕ್ಕೇ ಸೀಮಿತವಾಗಿದ್ದೇವೆ. ಪಾರ್ಟ್‌-2ರಲ್ಲಿ ಏನಿದೆ ಎಂಬುದು ನಮಗೆ ಗೊತ್ತಿಲ್ಲ. ಮಾಹಿತಿ ದೊರೆತ ಬಳಿಕ ಈ ಬಗ್ಗೆ ಮಾತನಾಡುತ್ತೇವೆ” ಎಂದರು.
ಸ್ಟಿಂಗ್ ಆಪರೇಷನ್‌ನಲ್ಲಿ ಯಾರ ಹೆಸರು ಬಹಿರಂಗಪಡಿಸಬೇಕು ಎಂಬ ಪ್ರತಿಪಕ್ಷಗಳ ಒತ್ತಾಯದ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಅವರು ಯಾವುದೇ ಸಚಿವರ ಹೆಸರನ್ನು ಉಲ್ಲೇಖಿಸಿಲ್ಲ. ಹಣದ ಆಮಿಷವೊಡ್ಡಿ ವಿವಿಧ ರೀತಿಯಲ್ಲಿ ಬಲೆಗೆ ಬೀಳಿಸುವ ಸಾಧ್ಯತೆ ಇರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ. ಸ್ಟಿಂಗ್ ಆಪರೇಷನ್ ನಡೆದಿದೆ ಎಂದು ಮುಖ್ಯಮಂತ್ರಿ ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.
ಸ್ಟಿಂಗ್ ಆಪರೇಷನ್ ಕುರಿತು ತನಿಖೆ ನಡೆಸುವ ವಿಚಾರವಾಗಿ, ತನಿಖೆಗೆ ಸಂಬಂಧಿಸಿದಂತೆ ಆಸಕ್ತರು ಮುಂದೆ ಬರಬೇಕು. ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೆ ಮುಂದಿನ ನಿರ್ಧಾರವನ್ನು ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಅಹಿಂದ ನಾಯಕರು ಮತ್ತೆ ಒಗ್ಗೂಡುತ್ತಿರುವ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, “ನಾವು ಒಗ್ಗೂಡುತ್ತಿರುವುದಲ್ಲ, ಈಗಾಗಲೇ ಒಗ್ಗಟ್ಟಾಗಿಯೇ ಇದ್ದೇವೆ. ಅಹಿಂದ ವಿಚಾರ ಬಂದಾಗ ಒಗ್ಗಟ್ಟಾಗಿರುತ್ತೇವೆ. ಇತರ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು” ಎಂದರು.
ಸದ್ಯಕ್ಕೆ ಅಹಿಂದ ನಾಯಕರ ಡಿನ್ನರ್ ಸಭೆ ನಡೆಯುವುದಿಲ್ಲ. ಎಸ್‌ಐಆರ್ ಪ್ರಕ್ರಿಯೆ ಮುಗಿಯುವವರೆಗೆ ಇಂತಹ ಸಭೆಗಳಿಲ್ಲ ಎಂದು ತಿಳಿಸಿದರು.
ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ ಎಂದರು.
ಕಿತ್ತೂರು ಉತ್ಸವದ ಕುರಿತು ಮಾತನಾಡಿದ ಸಚಿವರು, ಇದು ಪ್ರತಿವರ್ಷ ಅದ್ಧೂರಿಯಾಗಿ ಆಚರಿಸಲಾಗುವ ಕಾರ್ಯಕ್ರಮವಾಗಿದೆ. ಕಿತ್ತೂರಿನ ಹೋರಾಟ ಮತ್ತು ಇತಿಹಾಸವನ್ನು ಜನರಿಗೆ ಪರಿಚಯಿಸುವುದು ಉತ್ಸವದ ಉದ್ದೇಶವಾಗಿದೆ. ಈ ಬಾರಿ ಜಾನುವಾರು ಜಾತ್ರೆಗೂ ವ್ಯವಸ್ಥೆ ಮಾಡಲಾಗಿದ್ದು, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಜ್ಞಾನದ ಕುರಿತು ಜಾಗೃತಿ ಮೂಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.

Share with Friends
author avatar
Digital Desk