
ಬರ ಪರಿಹಾರಕ್ಕೆ ಆಗ್ರಹಿಸಿ ನಿಡಗುಂದಿಯಲ್ಲಿ ರೈತ ಸಂಘಟನೆಗಳಿಂದ ಪ್ರತಿಭಟನೆ..!
ವಿಜಯಪುರ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತುರ್ತಾಗಿ ಬರ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ, ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಹತ್ವದ ಮನವಿ ಸಲ್ಲಿಸಲಾಯಿತು.
ನಿಡಗುಂದಿಯ ತಹಶೀಲ್ದಾರ್ ಕಚೇರಿಯ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ರೈತ ಮುಖಂಡರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.
ವಿಶೇಷ ತಂಡಗಳ ರಚನೆಗೆ ಒತ್ತಾಯ: ಬರಪೀಡಿತ ಪ್ರದೇಶಗಳನ್ನು ಆದಷ್ಟು ಬೇಗ ಗುರುತಿಸಲು ವಿಶೇಷ ತಂಡಗಳನ್ನು ರಚನೆ ಮಾಡಬೇಕು. ವಿಳಂಬ ಮಾಡದೆ ರೈತರಿಗೆ ತುರ್ತಾಗಿ ಬರ ಪರಿಹಾರ ನೀಡುವ ಕೆಲಸ ನಡೆಯಬೇಕೆಂದು ರೈತರು ಆಗ್ರಹಿಸಿದ್ದಾರೆ.
ಚಿಂತಾಜನಕ ಸ್ಥಿತಿಯಲ್ಲಿ ರೈತರು: ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಬಿತ್ತನೆ ಕಾರ್ಯಗಳು ಕುಂಠಿತಗೊಂಡಿವೆ. ಸಾಲಸೋಲ ಮಾಡಿ ಬೀಜ, ಗೊಬ್ಬರ ತಂದಿಟ್ಟುಕೊಂಡಿರುವ ರೈತರು ಮಳೆಗಾಗಿ ಕಾಯುವಂತಾಗಿದ್ದು, ರೈತರ ಜೀವನ ಚಿಂತಾಜನಕವಾಗಿದೆ.
ಒಣಗಿದ ಬೆಳೆಗಳು: ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳು ಮಳೆಯಿಲ್ಲದೆ ಒಣಗಿ ಹೋಗುತ್ತಿದ್ದು, ರೈತರ ಆಸೆಗಳು ಕುಗ್ಗಿ ಹೋಗಿವೆ. ವಿಜಯಪುರ ಜಿಲ್ಲೆಯು ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿದ್ದು, ಬರಪೀಡಿತ ಪ್ರದೇಶ ಎಂಬ ಕುಖ್ಯಾತಿಗೆ ಒಳಗಾಗುತ್ತಿದೆ. ಈಗಲಾದರೂ ಮುಖ್ಯಮಂತ್ರಿಗಳು ರೈತರ ಕಡೆ ಗಮನ ಹರಿಸಿ ಆಸರೆಯಾಗಬೇಕು ಎಂದು ಒತ್ತಾಯಿಸಿದರು.
ಬಿಡದಿ ಟೌನ್‌ಶಿಪ್‌ಗೆ ಎಚ್ಚರಿಕೆ: ಇದೇ ಸಂದರ್ಭದಲ್ಲಿ ಬಿಡದಿ ಟೌನ್‌ಶಿಪ್ ವಿಚಾರವನ್ನು ಪ್ರಸ್ತಾಪಿಸಿದ ರೈತ ನಾಯಕರು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ಕಸಿದುಕೊಳ್ಳುವ ಸಾಹಸಕ್ಕೆ ಕೈಹಾಕಬಾರದು. ಈ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
