
ಕೆಪಿಎಸ್ ಸಿ ಪಶುವೈದ್ಯರ ನೇಮಕಾತಿ ಪ್ರಕರಣ : ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶ
ಬೆಂಗಳೂರು,ಜು.28: ಕೆಪಿಎಸ್ ಸಿ ಪಶುವೈದ್ಯರ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿದೆ.
ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಈಗ ಸಿಐಡಿ ವಹಿಸಿಕೊಂಡಿದೆ. ಈ ಅಕ್ರಮ ನೇಮಕಾತಿ ಸಂಬಂಧ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಇವುಗಳಲ್ಲಿ ಒಂದು ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದರೆ, ಉಳಿದ ಎರಡು ಪ್ರಕರಣಗಳನ್ನು ಹೆಚ್ಚಿನ ಮತ್ತು ಸಮಗ್ರ ತನಿಖೆಗಾಗಿ ಸಿಐಡಿಗೆ ಹಸ್ತಾಂತರಿಸಲಾಗಿದೆ.
ಡಿಜಿಐಜಿಪಿ ಆದೇಶದಂತೆ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದ್ದು, ಸಿಐಡಿ ತಂಡವು ಮುಂದಿನ ತನಿಖೆಯನ್ನು ನಡೆಸಲಿದೆ.
ಇದೇ ಡೀಲಿಂಗ್ ಪ್ರಕರಣಕ್ಕೆ ಸಂಬಂಧಿಸಿದತೆ ಮೂರು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಪಿಎಸ್‌ಸಿ ಯಲ್ಲಿ ಹುದ್ದೆಗಾಗಿ ನಡೆದಿದೆ ಎನ್ನಲಾದ ಡೀಲಿಂಗ್ ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ 3 ಎಫ್‌ಐಆರ್ ದಾಖಲಾಗಿದೆ. ಈ ಪೈಕಿ 2 ಎಫ್‌ಐಆರ್‌ಗಳನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಉಳಿದ ಒಂದು ಕೇಸ್‌ಗೆ ಕೋರ್ಟ್ ನಲ್ಲಿ ಅನುಮತಿ ಕೇಳಲಾಗಿದೆ. ಸದ್ಯ 2 ಕೇಸ್‌ಗಳನ್ನ ಸಿಐಡಿಗೆ ವರ್ಗಾವಣೆ ಮಾಡಿ ಡಿಜಿ ಅಂಡ್ ಐಜಿಪಿ ಆದೇಶ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪಶುವೈದ್ಯರ ನೇಮಕಾತಿಯಲ್ಲಿ ಸುಮಾರು 60% ಹುದ್ದೆಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಪ್ರತಿ ಹುದ್ದೆಗೆ 80 ಲಕ್ಷ ರೂಪಾಯಿ ಲಂಚ ನಿಗದಿಯಾಗಿತ್ತು ಎನ್ನುವ ಆರೋಪದ ಆಡಿಯೋ ಸಹ ವೈರಲ್ ಆಗಿತ್ತು. ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದರು. ಅಲ್ಲದೆ, ಈ ಪ್ರಕರಣವು ರಾಜ್ಯದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರದ ಆರೋಪಗಳಿಗೆ ಎಡೆಮಾಡಿಕೊಟ್ಟಿದೆ.
