Latestರಾಜಕೀಯ | Politicsರಾಜ್ಯ-Karnataka

ತಮಿಳುನಾಡಿಗೆ ನೀರು ಬಿಡುಗಡೆ, KPSC ಅಕ್ರಮದ ಬಗ್ಗೆ ಆರಗ ಜ್ಞಾನೇಂದ್ರ ವಾಗ್ದಾಳಿ

ಬೆಂಗಳೂರು: ತಮಿಳುನಾಡಿಗೆ 3,500 ಕ್ಯೂಸೆಕ್ಸ್ ಕಾವೇರಿ ನೀರು ಬಿಡುಗಡೆ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ಕ್ರಮವನ್ನು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ತೀವ್ರವಾಗಿ ಟೀಕಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ನ್ಯಾಯಾಲಯ ಹಾಗೂ ಕಾವೇರಿ ನೀರು ಹಂಚಿಕೆ ಪ್ರಾಧಿಕಾರದ ಮುಂದೆ ಸಮರ್ಪಕವಾಗಿ ವಾದ ಮಂಡಿಸುತ್ತಿಲ್ಲ ಎಂದು ಆರೋಪಿಸಿದರು.

ಕ್ಯಾಚ್ಮೆಂಟ್ ಪ್ರದೇಶದಲ್ಲಿ ಮಳೆ ಇಲ್ಲದಿದ್ದರೆ ನೀರನ್ನು ಎಲ್ಲಿಂದ ಬಿಡುವುದು ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲಿ ಕಾವೇರಿ ನೀರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಪುನರ್‌ಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕೂ ಆದ್ಯತೆ ನೀಡಬೇಕೆಂದು ಹೇಳಿದರು.

ಇದೇ ವೇಳೆ ಕೆಪಿಎಸ್ಸಿ ಪರೀಕ್ಷೆ ಅಕ್ರಮ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ದೇಶಪಾಂಡೆ ನೇತೃತ್ವದಲ್ಲಿ ಕೆಪಿಎಸ್ಸಿ ಹಗರಣ ಮುಕ್ತಗೊಳಿಸಲು ತಂಡ ಕಾರ್ಯನಿರ್ವಹಿಸುತ್ತಿದ್ದು, ಯುವಕರಿಗೆ ನ್ಯಾಯ ದೊರಕಿಸಲು ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ಕೆಪಿಎಸ್ಸಿಯಲ್ಲಿ ಕೆಲವರು ಹಗರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕೆಮಿಸ್ಟ್ರಿ ಪ್ರಶ್ನೆಪತ್ರಿಕೆ ಮೂರು ಬಾರಿ ಸೋರಿಕೆಯಾಗಿತ್ತು, ಈ ಅಕ್ರಮಗಳಿಂದ ಹಲವು ಯುವಕರ ಜೀವನ ಹಾಳಾಗಿದೆ ಎಂದು ಹೇಳಿದರು. ಒಂದು ಹುದ್ದೆಗೆ ₹80 ಲಕ್ಷವರೆಗೆ ಹಣ ಪಡೆದು ನೇಮಕಾತಿ ನಡೆದಿದೆ ಎಂಬ ಗಂಭೀರ ಆರೋಪವೂ ಮಾಡಿದರು.

ನೀಟ್ ಪರೀಕ್ಷೆ ವಿಚಾರದಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಪರೀಕ್ಷಾ ಅಕ್ರಮ ತಡೆಯಲು ಕಠಿಣ ಕಾನೂನು ತರಲು ಮುಂದಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಪರೀಕ್ಷಾ ಅಕ್ರಮ ತಡೆಯುವ ವಿಶೇಷ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕೆಪಿಎಸ್ಸಿ ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸ್ಪಷ್ಟ ಕಾನೂನು ರೂಪಿಸಬೇಕೆಂದು ಆರಗ ಜ್ಞಾನೇಂದ್ರ ಆಗ್ರಹಿಸಿದರು.

Share with Friends
author avatar
News Desk